ಈ ಮಾವಿನಹಣ್ಣಿನ ಸ್ವಾದ ಸವಿಯಲು ನೀವು ಪಾವತಿಸಬೇಕು 2000ರೂ!! | ಮಾರುಕಟ್ಟೆಗೆ ಬರುವ ಮುಂಚೆಯೇ ಈ ಹಣ್ಣುಗಳ ರಾಜನ ಬುಕ್ಕಿಂಗ್ ಬಲು ಜೋರು

Share the Article

ಮಾವಿನ ಹಣ್ಣಿನ ಸೀಸನ್ ಈಗಾಗಲೇ ಆರಂಭವಾಗಿದೆ. ಮಾವು ಪ್ರಿಯರ ಮೂಗಿನ ಹೊಳ್ಳೆಗಳು ಅರಳಿಕೊಂಡೆ ಇರುವ ಸಮಯ. ಅಷ್ಟರ ಮಟ್ಟಿಗೆ ಹಣ್ಣುಗಳ ರಾಜ ಮಾವು ತನ್ನ ಘಮದಿಂದ ಮತ್ತು ವಿಶಿಷ್ಟ ಥರಾವರಿ ಬಣ್ಣದಿಂದ ಜನರನ್ನು ಆಕರ್ಷಿಸುತ್ತಿದೆ. ಈ ಮ್ಯಾಂಗೋ ಸೀಸನ್ ನಲ್ಲಿ ಮಾರುಕಟ್ಟೆಯಲ್ಲಿ ವಿವಿಧ ತಳಿಗಳ ಹಣ್ಣುಗಳು ದೊರೆಯುತ್ತಿದ್ದು, ಬಿರು ಬೇಸಿಗೆಯಲ್ಲಿ ಜನರು ಮಾವಿನಹಣ್ಣನ್ನು ಚಪ್ಪರಿಸಿ ತಿನ್ನುತ್ತಿದ್ದಾರೆ. ಆದರೆ ಇಲ್ಲೊಂದು ಕಡೆ ಬೆಳೆಯುವ ಮಾವಿನಹಣ್ಣಿನ ರುಚಿ ಸವಿಯಲು ಬಯಸುವವರು ಒಂದು ಹಣ್ಣಿಗೆ 2000 ರೂ.ಪಾವತಿ ಮಾಡಲೇಬೇಕು !!

ಹೌದು. ಇಲ್ಲಿ ಬೆಳೆಯುವ ಮಾವಿನ ಹಣ್ಣಿನ ಬೆಲೆ ₹2000. ಕಾರಣ ಅವುಗಳ ಗಾತ್ರ. ಸಾಮಾನ್ಯವಾಗಿ ರೈತರು ಬೆಳೆಯುವ ಮಾವಿನ ಹಣ್ಣುಗಳು 100 ರಿಂದ 300 ಗ್ರಾಂ ಇರುತ್ತವೆ. ಹೆಚ್ಚೆಂದರೆ 500 ಗ್ರಾಂ ಬರಬಹುದು. ಆದರೆ, ಮಧ್ಯಪ್ರದೇಶದ ಜಿಲ್ಲೆಯೊಂದರಲ್ಲಿ ಬೆಳೆಯುವ ಮಾವಿನ ಹಣ್ಣು ಬರೋಬ್ಬರಿ 4 ಕೆ.ಜಿ ವರೆಗೂ ಬರಲಿದ್ದು, ತಿಂಗಳಿಗೆ ಮುಂಚೆಯೇ ಬುಕ್ಕಿಂಗ್ ಶುರುವಾಗಿದೆ.

ಮಧ್ಯಪ್ರದೇಶದ ಕಥ್ಥಿವಾಡ ಪ್ರದೇಶದಲ್ಲಿ ಬೆಳೆಯಲಾಗುವ ಈ ವಿಶೇಷ ತಳಿಯ ಮಾವಿನ ಹಣ್ಣು ಗರಿಷ್ಠ 4 ಕೆ.ಜಿ ವರೆಗೂ ಇರಲಿದೆ. ಅತ್ಯಂತ ಸಿಹಿಯಾಗಿರುವ ಈ ಮಾವಿನ ಹಣ್ಣು ಗಾತ್ರದಷ್ಟೇ ದುಬಾರಿ ದರವೂ ಹೊಂದಿದ್ದು, 1 ರಿಂದ 2 ಸಾವಿರ ರೂ. ವರೆಗೆ ಮಾರಾಟವಾಗುತ್ತದೆ.

ಅಫ್ಘಾನಿಸ್ತಾನ ಮೂಲದ ನೂರ್‌ಜಹಾನ್ ಎಂಬ ಮಾವಿನ ತಳಿಯ ಹಣ್ಣು 1 ಅಡಿ ಉದ್ದ ಮತ್ತು 4 ಕೆಜಿ ತೂಕವಿರಲಿದೆ. ಜನವರಿ-ಫೆಬ್ರವರಿ ವೇಳೆ ಈ ಮರಗಳಲ್ಲಿ ಹೂವು ಬಿಡಲು ಪ್ರಾರಂಭವಾಗುತ್ತವೆ. ಜೂನ್ ಮೊದಲ ವಾರದ ವರೆಗೆ ಹಣ್ಣು ಬಲಿತು ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತವೆ. ಆದರೆ, ದುಬಾರಿ ಹವಾಮಾನ ವೈಪರಿತ್ಯದಿಂದಾಗಿ ಮರಗಳಲ್ಲಿ ಈ ಬಾರಿ ಕಾಯಿ ಕಡಿಮೆಯಾಗಿದೆ. ಹಣ್ಣಾಗುವ ಮೊದಲೇ ಹೂವು ಉದುರಿಹೋಗಿದ್ದು, ಮೂರೇ ಮರಗಳಲ್ಲಿ 250 ಕಾಯಿಗಳು ಉಳಿದಿವೆ.

ಕಳೆದ ವರ್ಷ ಪ್ರತಿ ಹಣ್ಣನ್ನು 500 ರಿಂದ 1,500ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ವರ್ಷ 2 ಸಾವಿರ ರೂ. ವರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಜೂನ್ ತಿಂಗಳ ವೇಳೆ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಇದಕ್ಕೆ ಆಕರ್ಷಿತರಾಗಿರುವ ಮಾವು ಪ್ರಿಯರು ತಿಂಗಳಿಗೆ ಮುಂಚಿತವಾಗಿಗೆ ಬುಕ್ಕಿಂಗ್ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಮಾವು ಬೆಳೆಗಾರರೊಬ್ಬರು ತಿಳಿಸಿದ್ದಾರೆ.

Leave A Reply

Your email address will not be published.