ಗೆಳತಿಯ ಜೊತೆ ಮಾತನಾಡಲು ಬಿಡದ ಗಂಡ| ಸ್ನೇಹಿತನಿಂದ ಸ್ನೇಹಿತೆಯ ಗಂಡನ ಅಪಹರಣ, ಉಸಿರುಗಟ್ಟಿಸಿ ಹತ್ಯೆ

ಅವರಿಬ್ಬರೂ ಕ್ಲಾಸ್ ಮೇಟ್ಸ್. ಒಳ್ಳೆ ಫ್ರೆಂಡ್ಸ್. ದೊಡ್ಡವರಾದ ಮೇಲೆ ಅವಳು ಅವಳ ದಾರಿ ನೋಡಿಕೊಂಡಳು, ಇವನು ಇವನ ದಾರಿ. ನಂತರ ಆಕೆಗೆ ಮದುವೆ, ಮಕ್ಕಳು ಎಲ್ಲಾ ಆಯಿತು. ಒಂದು ದಿನ ಆ ಗೆಳತಿ ಆತನಿಗೆ ಸಿಗುತ್ತಾಳೆ. ಇವರ ಸ್ನೇಹ ಮತ್ತೆ ಮುಂದುವರಿಯುತ್ತೆ. ಆದರೆ ಇದು ಆಕೆಯ ಗಂಡನಿಗೆ ಇಷ್ಟವಾಗುವುದಿಲ್ಲ. ಹಾಗಾದರೆ ಮುಂದೇನಾಯ್ತು ? ಬನ್ನಿ ತಿಳಿಯೋಣ!

 

ಜೋಹೇಬ್ ಅಬ್ರಾರ್ ಹಾಗೂ ಶಬೀನ್ ಖಾನಂ ಐದು ವರ್ಷದ ಹಿಂದೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜೋಹೇಬ್ ಕಬ್ಬಿಣದ ವ್ಯಾಪಾರ ಮಾಡುತ್ತಿದ್ದ. ಈ ನಡುವೆ ಗಂಗೊಂಡನಹಳ್ಳಿಯಲ್ಲಿ ಬಟ್ಟೆ ಅಂಗಡಿ ಇರಿಸಿಕೊಂಡಿರುವ ಆರೋಪಿ ನದೀಮ್ ಅಹಮದ್ ತನ್ನ ಶಾಲಾ ಸಹಪಾಠಿಯಾಗಿದ್ದ ಶಬೀನ್ ಖಾನಂ ಜತೆಗೆ ಸಲುಗೆಯಿಂದ ಮಾತನಾಡುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು.ಇವರಿಬ್ಬರ ಈ ಸಲುಗೆ ಕಂಡು ಜೋಹೇಬ್, ನದೀಮ್ ಗೆ ಪತ್ನಿಯ ಜತೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದ. ಇದರಿಂದ ಆಕ್ರೋಶಗೊಂಡ ನದೀಮ್, ಗೆಳತಿಯ ಜತೆಗೆ ಮಾತನಾಡಲು ಅಡ್ಡಿಯಾಗಿದ್ದ ಜೋಹೇಬ್ ಹತ್ಯೆಗೆ ಸಂಚು ರೂಪಿಸಿ ಆತನನ್ನು ಕೊಲೆ ಮಾಡಿದ್ದಾನೆ.

ಏ.30ರಂದು ಕೆಲಸ ಮುಗಿಸಿ ಮನೆಗೆ ಬಂದಿದ್ದ ಜೋಹೇಬ್, ಮಕ್ಕಳಿಗೆ ಹಾಲು ತರಲು ರಾತ್ರಿ 10.30ಕ್ಕೆ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರ ಹೋಗಿದ್ದ. ಈ ವೇಳೆ ಗಂಗೊಂಡನಹಳ್ಳಿ ಬೆಂಗಳೂರು ಒನ್ ಕೇಂದ್ರದ ಬಳಿ ಎದುರಾದ ಆರೋಪಿ ನದೀಮ್ ಅಹಮದ್ ಹಾಗೂ ಸಹಚರರು ಜೋಹೇಬ್ ಜತೆಗೆ ಜಗಳ ತೆಗೆದಿದ್ದಾರೆ. ಬಳಿಕ ಆತನನ್ನು ಬಲವಂತವಾಗಿ ಟಾಟಾ ಏಸ್
ವಾಹನದಲ್ಲಿ ಅಪಹರಿಸಿಕೊಂಡು ಪರಾರಿಯಾಗಿದ್ದಾರೆ. ಬಳಿಕ ರಿಂಗ್ ರಸ್ತೆ ಆರ್.ಆರ್.ನಗರದ ವಿವಿಧ ರಸ್ತೆಗಳಲ್ಲಿ ಸುತ್ತಾಡಿಸಿ ಜೋಹೇಬ್ ಬಾಯಿಗೆ ಟೇಪ್ ಸುತ್ತಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.

ನಂತರ ಪಾದಚಾರಿ ಮಾರ್ಗದಲ್ಲಿ ಮೃತದೇಹ ಇರಿಸಿ ಪರಾರಿಯಾಗಿದ್ದರು. ಬೆಳಗ್ಗೆ ಇದನ್ನು ಗಮನಿಸಿದ ಸಾರ್ವಜನಿಕರು ಜೋಹೇಬ್ ಪತ್ನಿಗೆ ವಿಚಾರ ತಿಳಿಸಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ಜೋಹೇಬ್ ಮಲಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಹೀಗಾಗಿ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಯುಡಿಆರ್ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವನಪ್ಪಿರುವುದು ಗೊತ್ತಾಗಿತ್ತು.

ಅಷ್ಟೇ ಅಲ್ಲದೆ, ಈ ಸಾವಿನ ಬಗ್ಗೆ ಜೋಹೇಬ್ ತಾಯಿ ಫರೀದಾ ಸುಲ್ತಾನ ಅನುಮಾನ ವ್ಯಕ್ತಪಡಿಸಿದ್ದರು. ಸೊಸೆ ಶಬೀನ್ ಖಾನಂ, ಆರೋಪಿ ನದೀಮ್ ಹಾಗೂ ಆತನ ಸಹಚರರೇ ಮಗನನ್ನು ಹತ್ಯೆ ಮಾಡಿರಬಹುದು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ನದೀಮ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಯ ಸಂಚು ಬಯಲಾಗಿದೆ. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ.

ಗೆಳತಿಯನ್ನು ಸಲುಗೆಯಿಂದ ಮಾತನಾಡಿಸಲು ಅಡ್ಡಿಪಡಿಸುತ್ತಿದ್ದ ಅಕೆಯ ಪತಿಯನ್ನು ಅಪಹರಿಸಿ ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿ ರಸ್ತೆ ಬದಿ ಮಲಗಿಸಿ ಹೋಗಿದ್ದ ಏಳು ಮಂದಿ ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಂಗೊಂಡನಹಳ್ಳಿಯ ನದೀಮ್ ಅಹಮದ್(23), ತಸ್ವೀರ್ ಪಾಷಾ(21), ಮೊಹಮದ್ ಮುಬಾರಕ್(21), ಶಬೀರ್ ಹುಸೇನ್(23), ಮೊಹಮದ್ ಶಫಿ(23), ಹನಾನ್ ಪಾಷಾ(20), ತಬ್ರೇಜ್ ಪಾಷಾ(23) ಬಂಧಿತರು. ಈ ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರನ್ನೂ ವಶಕ್ಕೆ ಪಡೆಯಲಾಗಿದೆ.

ಈ ಹತ್ಯೆಗೆ ಶಬೀನ್ ಖಾನಂ ಸಹಕರಿಸಿದ್ದಳೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.