ಎಲ್ಲಾ ವಾಹನಗಳ ಟೈರ್ ಕಪ್ಪು ಬಣ್ಣದಲ್ಲೇ ಯಾಕಿರುತ್ತೆ ಗೊತ್ತಾ..? ಹಾಗೆನೇ ಮಕ್ಕಳ ಸೈಕಲ್ ನ ಟೈರ್ ಹಲವು ಬಣ್ಣಗಳಲ್ಲಿ ಇರುತ್ತದೆ…ಯಾಕೆ ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸಂಗತಿ- ಬನ್ನಿ ತಿಳಿಯೋಣ!

Share the Article

ಬಗೆಬಗೆಯ ಬಣ್ಣಗಳು ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಮನಸ್ಸಿಗೆ ತಂಪು ಕಣ್ಣಿಗೆ ಹಬ್ಬವನ್ನೇ ಉಂಟು ಮಾಡುತ್ತವೆ ಬಣ್ಣಗಳು. ಕೆಲವರು ಗಾಢ ಬಣ್ಣ ಇಷ್ಟಪಟ್ಟರೆ ಇನ್ನು ಕೆಲವರು ಸೌಮ್ಯವಾದ ಬಣ್ಣಗಳೇ ತುಂಬಾ ಇಷ್ಟ ಎನ್ನುತ್ತಾರೆ.

ರಸ್ತೆಯಲ್ಲಿ ಓಡಾಡೋ ವಾಹನಗಳು ಹತ್ತಾರು ಬಣ್ಣಗಳಲ್ಲಿರುತ್ತವೆ. ಆದ್ರೆ ಅವುಗಳ ಟೈರ್ ಮಾತ್ರ ಕಪ್ಪಗಿರುತ್ತದೆ. ಯಾಕೆ? ಯಾವತ್ತಾದರೂ ಯೋಚನೆ ಮಾಡಿದ್ದೀರಾ? ಎಲ್ಲಾ ಟೈರ್‌ಗಳು ಏಕೆ ಕಪ್ಪು ಬಣ್ಣದಲ್ಲಿರುತ್ತವೆ ಅನ್ನೋದು ಬಹಳ ಇಂಟ್ರೆಸ್ಟಿಂಗ್ ಸಂಗತಿ.

ಈ ಮೊದಲು ಟೈರ್‌ಗಳನ್ನು ರಬ್ಬರ್‌ನಿಂದ ತಯಾರಿಸಲಾಗುತ್ತಿತ್ತು. ಆದ್ರೆ ರಬ್ಬರ್‌ನ ನೈಸರ್ಗಿಕ ಬಣ್ಣವು ಕಪ್ಪು ಅಲ್ಲ. ರಬ್ಬರ್‌ನಿಂದ ಮಾಡಿದ ಟೈರ್‌ಗಳು ಬಹುಬೇಗ ಸವೆಯಲು ಪ್ರಾರಂಭವಾಗಿದ್ದರಿಂದ, ವಿಜ್ಞಾನಿಗಳು ಸಂಶೋಧನೆ ನಡೆಸಿದಾಗ ರಬ್ಬರ್‌ನಲ್ಲಿ ಇಂಗಾಲ ಮತ್ತು ಗಂಧಕವನ್ನು ಬೆರೆಸಿದರೆ ಅದು ಬಲಗೊಳ್ಳುತ್ತದೆ ಎಂಬುದು ಪತ್ತೆಯಾಯ್ತು.

ಕಚ್ಚಾ ರಬ್ಬರ್ ಬಣ್ಣವು ತಿಳಿ ಹಳದಿಯಾಗಿರುತ್ತದೆ. ಟೈರ್ ಮಾಡಲು ಕಾರ್ಬನ್ ಅನ್ನು ರಬ್ಬರ್‌ಗೆ ಸೇರಿಸಲಾಗುತ್ತದೆ. ಹೀಗೆ ಮಾಡುವುದರಿಂದ ಟೈರ್ ಬೇಗನೆ ಸವೆಯುವುದಿಲ್ಲ. ಇಂಗಾಲದ ಬಣ್ಣ ಕಪ್ಪು. ಆದ್ದರಿಂದಲೇ ರಬ್ಬರ್‌ಗೆ ಇಂಗಾಲವನ್ನು ಸೇರಿಸಿದಾಗ ರಬ್ಬರ್ ಕೂಡ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ನೇರಳಾತೀತ ಕಿರಣಗಳಿಂದ ಟೈರ್ ಅನ್ನು ರಕ್ಷಿಸುತ್ತದೆ.

ಬರೀ ರಬ್ಬರ್ ಟೈರ್ ಆದ್ರೆ ಕೇವಲ 8 ಸಾವಿರ ಕಿಲೋಮೀಟರ್ ಬಾಳಿಕೆ ಬರುತ್ತದೆ. ಆದರೆ ಕಾರ್ಬೊನೈಸ್ ರಬ್ಬರ್‌ನಿಂದ ಮಾಡಿದ ಟೈರ್ ಸುಮಾರು 1 ಲಕ್ಷ ಕಿಲೋಮೀಟರ್ ಓಡುವ ಸಾಮರ್ಥ್ಯ ಹೊಂದಿದೆ. ರಬ್ಬರ್‌ಗೆ ಸೇರಿಸುವ ಕಾರ್ಬನ್‌ನಲ್ಲೂ ಹಲವು ಬಗೆಗಳಿವೆ. ಎಷ್ಟು ಬಲವಾದ ಟೈರ್ ಬೇಕು ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆ.

ಮೃದುವಾದ ರಬ್ಬರ್ ಟೈರ್‌ಗಳು ಬಲವಾದ ಹಿಡಿತವನ್ನು ಹೊಂದಿರುತ್ತವೆ ಆದರೆ ಬೇಗನೆ ಸವೆಯುತ್ತವೆ. ಮಕ್ಕಳ ಸೈಕಲ್‌ಗಳಿಗೆ ಬಿಳಿ, ಹಳದಿ ಹೀಗೆ ನಾನಾ ಬಣ್ಣಗಳ ಟೈರ್ ಅನ್ನು ಅಳವಡಿಸಿರುತ್ತಾರೆ. ಇದಕ್ಕೆ ಕಾರಣ ಮಕ್ಕಳ ಸೈಕಲ್‌ಗಳು ರಸ್ತೆಯಲ್ಲಿ ಹೆಚ್ಚು ಓಡುವುದಿಲ್ಲ. ಹಾಗಾಗಿ ಮಕ್ಕಳ ಸೈಕಲ್ ಟೈರ್‌ಗಳಿಗೆ ಕಾರ್ಬನ್ ಸೇರ್ಪಡೆ ಮಾಡುವುದಿಲ್ಲ.

Leave A Reply