ಸಿದ್ದರಾಮಯ್ಯ ಪರ್ಸಂಟೇಜ್ ಪಿತಾಮಹ,ಅನೈತಿಕ ರಾಜಕಾರಣದ ಅಸಲಿ ಅಪ್ಪ- ಹೆಚ್.ಡಿ.ಕುಮಾರ ಸ್ವಾಮಿ

ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವಿನ ಮಾತಿನ ಸಮರ ಮುಂದುವರಿದಿದೆ. ಇದೀಗ ಸಿದ್ದರಾಮಯ್ಯ ವಿರುದ್ಧ ಮತ್ತೆ ಟ್ವೀಟಾಸ್ತ್ರ ಮುಂದುವರಿಸಿರುವ ಕುಮಾರಸ್ವಾಮಿ, “ಪರ್ಸಂಟೇಜ್ ಪಿತಾಮಹ, ಅನೈತಿಕ ರಾಜಕಾರಣದ ಅಸಲಿ’ ಎಂದು ಟ್ವೀಟ್ ಮಾಡುವ ಮೂಲಕ ಮತ್ತೆ ಕಾಲೆಳೆದಿದ್ದಾರೆ.

 

ಸರಣಿ ಟ್ವೀಟ್ ಮಾಡಿರುವ ಎಚ್ ಡಿಕೆ, ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ, ಆ ಪಾಪಕ್ಕೆ ಪ್ರತಿಯಾಗಿ ಪಡೆದ ಫಲದ ಬಗ್ಗೆ ಪಲಾಯನವೇಕೆ ಸುಳ್ಳುರಾಮಯ್ಯ? ಕಳ್ಳಮಾಲು ಹ್ಯೂಬ್ಲೆಟ್ ವಾಚಿನ ಬಗ್ಗೆ ವಾಕರಿಕೆ ಬರುವಷ್ಟು ಹೇಸಿಗೆ ಕಥೆಗಳೇ ಇವೆ. ಇವೆರಡೂ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ, ಯಾಕಯ್ಯಾ? ಈಶ್ವರಪ್ಪ ಬಗ್ಗೆ ಮಾತನಾಡಿ, ಅಭ್ಯಂತರವಿಲ್ಲ.

ಡಿವೈಎಸ್ಪಿ ಗಣಪತಿ ಬಗ್ಗೆಯೂ ಹೇಳಿ, ಬೇಜಾರಿಲ್ಲ. ಆದರೆ; ಕಲ್ಲಪ್ಪ ಹಂಡೀಭಾಗ್ ಬಗ್ಗೆ ಮಾತನಾಡಿದರೆ ನಿಮ್ಮ ಜಾಣ ಮೌನವೇಕೆ? ಆ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿದೇ ವಿಧಿಯೇ ಇಲ್ಲ. ಪ್ರಾಮಾಣಿಕ ಅಧಿಕಾರಿಯ ದುರಂತ ಅಂತ್ಯ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಸುಳ್ಳು ಹೇಳಿದ್ದೀರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ನಿಮ್ಮ ಐದು ವರ್ಷಗಳ ದುರಾಡಳಿತದಲ್ಲಿ ಆ ಜಿಲ್ಲೆಯೊಂದರಲ್ಲೇ 200 ರೈತರು ಆತ್ಮಹತ್ಯೆಗೆ ಶರಣಾದರು. ಮೈಷುಗರ್ ಕಾರ್ಖಾನೆ ಮುಚ್ಚಿಸಿ ಕಬ್ಬು ಬೆಳೆಗಾರರ ಮನೆ ಹಾಳು ಮಾಡಿದಿರಿ. ಮರೆತುಬಿಟ್ಟಿರಾ ಸುಳ್ಳುರಾಮಯ್ಯ? ಮಂಡ್ಯದಲ್ಲಿ ಏಳೂ ಸೀಟು ಸಿಗಲಿಲ್ಲ ಎಂದು ಜನರ ಮುಂದೆ ಹಲುಬುತ್ತೀರಿ. 200 ಅನ್ನದಾತರ ಜೀವಕ್ಕೆ ಎರವಾಗಿ, ಇಡೀ ಜಿಲ್ಲೆಯಲ್ಲಿ ಮರಣಮೃದಂಗ ಭಾರಿಸಿದ ನಿಮ್ಮ ರೈತವಿರೋಧಿ ನೀತಿಗಳು ಕಸಿದ ಜೀವಗಳ ಲೆಕ್ಕವೆಲ್ಲಾ ಚುಕ್ತಾ ಆಗುವ ಕಾಲ ಬಂದಿದೆ. ಜೀವ ತೆಗೆಯುವ ಜವರಾಯನ ಅವತಾರವೇ ನೀವಾಗಿರುವಾಗ ನಮ್ಮ ಕಣ್ಣೀರನ್ನು ಹಂಗಿಸುತ್ತೀರಿ ಎಂದು ಟೀಕೆ ಮಾಡಿದ್ದಾರೆ.

ಆಪರೇಷನ್ ಕಮಲದಿಂದ ನಿಮ್ಮ ಜೇಬು ಸೇರಿದ ಆಕರ್ಷಕ ಅಂಕಿಯ ಹಣದ ಅಸಲಿಯತ್ತು ನನಗೂ ಗೊತ್ತು! ನೀವು ರಾಜ್ಯ ಕಂಡ ಗ್ರೇಟ್ ಹಣಕಾಸು ಮಂತ್ರಿ, ಪ್ಲಸ್ಸೂ ಮೈನಸ್ಸಿನ ಪ್ರವೀಣ, ಪರ್ಸಂಟೇಜ್ ಪಿತಾಮಹನಷ್ಟೇ ಅಲ್ಲ, ಅನೈತಿಕ ರಾಜಕಾರಣದ ಅಸಲಿ ಅಪ್ಪ. ಈಗ ಹೇಳಿ? ಉಂಡ ಮನೆಗೆ ಮೂರು ಬಗೆದ ನೈಜ ಕಳ್ಳ ಯಾರು? ಮಿಸ್ಟರ್ ಸುಳ್ಳುರಾಮಯ್ಯ, ದಿನಕ್ಕಿಷ್ಟು ಸುಳ್ಳು, ಕ್ಷಣಕ್ಕೊಂದು ಪೊಳ್ಳು; ಇದು ನಿಮ್ಮ ಜೀವನಶೈಲಿ. ಅದಕ್ಕೇ ನೀವು ರಾಜಕೀಯ ಊಸರವಳ್ಳಿ. ಮೈಯ್ಯಲ್ಲಾ ಸುಳ್ಳನ್ನೇ ಮೆತ್ತಿಕೊಂಡು ಕಂಡವರರ ಮೇಲೆ ಸಿಡಿಸುವ ನಿಮ್ಮ ʼಸಿದ್ದಸೂತ್ರʼಕ್ಕೆ ಕೊನೆಗಾಲ ಹತ್ತಿರದಲ್ಲೇ ಇದೆ ಎಂದಿದ್ದಾರೆ.

Leave A Reply

Your email address will not be published.