ಹಿಂದುತ್ವದ ಭದ್ರಕೋಟೆ ಬೆಳ್ತಂಗಡಿ ತಾಲೂಕಿನಲ್ಲಿ ಶಾಂತಿ ಕದಡುವ ಯತ್ನ!! |ಹಿಂದೂ ಕಾರ್ಯಕರ್ತರು ಸ್ಥಾಪಿಸಿದ್ದ ಭಗವಾಧ್ವಜ ಕಂಬ ಸಮೇತ ನೆಲಕ್ಕುರುಳಿಸಿ ವಿಕೃತಿ
ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಉಪ್ಪಾರಪಳಿಕೆ ಎಂಬಲ್ಲಿ ಹಿಂದೂ ಕಾರ್ಯಕರ್ತರು ಸ್ಥಾಪಿಸಿದ್ದ ಭಗವಾಧ್ವಜದ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಹಾನಿಗೊಳಿಸಿ, ಕಂಬ ಹಾಗೂ ಭಗವಾಧ್ವಜವನ್ನು ನೆಲಕ್ಕುರುಳಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಶಾಸಕ ಹರೀಶ್ ಪೂಂಜಾ ಕಿಡಿಗೇಡಿಗಳ ಕೃತ್ಯಕ್ಕೆ ಕಿಡಿಕಾರಿದಲ್ಲದೇ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕೊಕ್ಕಡದಿಂದ ಪಟ್ರಮೆ ಸಂಪರ್ಕಿಸುವ ಮಾರ್ಗದ ಉಪ್ಪಾರಪಳಿಕೆ ಎಂಬಲ್ಲಿ ಅಲ್ಲಿನ ಕೆಲ ಹಿಂದೂ ಕಾರ್ಯಕರ್ತರು ಸೇರಿಕೊಂಡು ಭಗವಾಧ್ವಜದ ಕಟ್ಟೆಯನ್ನು ಸ್ಥಾಪಿಸಿದ್ದರು.ಆದರೆ ಮೊನ್ನೆಯ ದಿನ ರಾತ್ರಿ ಯಾರೋ ಕಿಡಿಗೇಡಿಗಳು ಕಟ್ಟೆಗೆ ಹಾನಿ ಎಸಗಿದ್ದು, ಅಲ್ಲದೇ ಧ್ವಜ ಸಮೇತ ಕಂಬವನ್ನು ನೆಲಕ್ಕುರುಳಿಸಿ ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ. ಮಾರನೇ ದಿನ ಘಟನೆ ಬೆಳಕಿಗೆ ಬಂದಿದ್ದು, ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಘಟನೆ ಬೆಳಕಿಗೆ ಬಂದ ದಿನ ಅಲ್ಲಿನ ವೈದ್ಯನಾಥೇಶ್ವರ ದೇವಾಲಯದ ಮೈದಾನದಲ್ಲಿ ಹಿಂ.ಜಾ.ವೇ ವತಿಯಿಂದ ನಡೆದ ಹೊನಲು ಬೆಳಕಿನ ಹಗ್ಗಜಗ್ಗಾಟದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಗಮಿಸಿದ್ದು, ಈ ವೇಳೆ ಭಗವಾಧ್ವಜಕ್ಕೆ ಅವಮಾನ ನಡೆದಿರುವ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಹಾನಿಯಾದ ಜಾಗದಲ್ಲೇ ಇನ್ನೊಂದು ಕಟ್ಟೆ ಸ್ಥಾಪಿಸುತ್ತೇವೆ. ಘಟನೆ ಮರುಕಳಿಸಿದಲ್ಲಿ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.