ಹಿಂದೂ ಯುವತಿಯ ಅಪಹರಣ ಆರೋಪ | ಮುಸ್ಲಿಂ ವ್ಯಕ್ತಿಗೆ ಸೇರಿದ 2 ಮನೆಗಳಿಗೆ ಬೆಂಕಿ ಹಚ್ಚಿದ ಆಕ್ರೋಶಿತ ಹಿಂದೂ ಕಾರ್ಯಕರ್ತರು !!
ಹಿಂದೂ ಯುವತಿಯನ್ನು ಅಪಹರಿಸಿದ ಆರೋಪಕ್ಕೊಳಗಾದ ಮುಸ್ಲಿಂ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಸೇರಿದ ಎರಡು ಮನೆಗಳಿಗೆ ಹಿಂದೂ ಕಾರ್ಯಕರ್ತರು ಬೆಂಕಿ ಹಚ್ಚಿದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಗುಂಪು ದಾಳಿಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇವರು ಧರ್ಮ ಜಾಗರಣ ಸಮನ್ವಯ ಸಂಘದ ಸದಸ್ಯರು ಎನ್ನಲಾಗಿದೆ. ನಿರ್ಲಕ್ಷ್ಯಕ್ಕಾಗಿ ಠಾಣಾ ಉಸ್ತುವಾರಿ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಸ್ಥಳೀಯ ಠಾಣಾಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಜಿಮ್ ಮಾಲೀಕ ಸಾಜಿದ್ ವಾಸಿಸುತ್ತಿದ್ದ ರುನಾಕ್ಟಾ ಪ್ರದೇಶದಲ್ಲಿದ್ದ ಮನೆಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಆ ಕುಟುಂಬಕ್ಕೆ ಸೇರಿದ ಸುತ್ತಮುತ್ತಲಿನ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. 22 ವರ್ಷದ ಯುವತಿಯನ್ನು ಅಪಹರಿಸಿದ ವ್ಯಕ್ತಿಯನ್ನು ಬಂಧಿಸಬೇಕು ಎಂದು ಉದ್ರಿಕ್ತ ಗುಂಪಿನ ಒತ್ತಾಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜಿಮ್ ಮಾಲೀಕನ ಮನೆಯ ಮೇಲಿನ ದಾಳಿಯಿಂದ ಸಾವು, ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ. ಹಿಂದೂ ಯುವತಿ ಸೋಮವಾರದಿಂದ ನಾಪತ್ತೆಯಾಗಿದ್ದಳು, ಎರಡು ದಿನಗಳ ನಂತರ ಆಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಸಾಜಿದ್ ಎಲ್ಲಿದ್ದ ಎಂಬುದು ತಿಳಿದುಬಂದಿಲ್ಲ.
ಆಕೆಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಹುಡುಕಾಟ ನಡೆಸಿದರು. ಆದರೆ, ತಾನೂ ವಯಸ್ಕಳಾಗಿದ್ದು, ಇಷ್ಟಪಟ್ಟು ಆತನೊಂದಿಗೆ ಹೋಗಿರುವುದಾಗಿ ಯುವತಿ ಹೇಳಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇಬ್ಬರು ವಯಸ್ಕರಾಗಿರುವುದಾಗಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುದೀರ್ ಕುಮಾರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆ ಯುವತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.