ಆಧಾರ್ ಕಾರ್ಡ್ ನಲ್ಲಿ ವಿಚಿತ್ರ ಹೆಸರು ನೊಂದಾಯಿಸಿದ ಸಿಬ್ಬಂದಿ | ಆಧಾರ್ ಕಾರ್ಡ್ ನಿಂದಾಗಿ ಬಾಲಕಿಗೆ ಶಾಲಾ ಪ್ರವೇಶ ನಿರಾಕರಣೆ |

ಆ ಮಗು ಶಾಲೆಗೆ ಸೇರಬೇಕೆಂಬ ಅದಮ್ಯ ಆಸೆ ಹೊಂದಿತ್ತು. ತಂದೆ ತಾಯಿಯು ಕೂಡಾ ಮಗುವನ್ನು ಶಾಲೆಗೆ ಸೇರಿಸಲು ಉತ್ಸಾಹದಿಂದ ಹೋಗಿದ್ದಾರೆ. ಆದರೆ ಆ ಬಾಲಕಿಗೆ ಶಾಲಾ ಮಂಡಳಿ ಶಾಲಾ ಪ್ರವೇಶವನ್ನು ನಿರಾಕರಿಸಿದ್ದಾರೆ. ಇದನ್ನು ಕೇಳಿ ಬಾಲಕಿಯ ತಂದೆ ತಾಯಿಯರು ಆವಕ್ಕಾಗಿದ್ದಾರೆ. ಅನಂತರ ಅವರಿಗೆ ಆದ ಪ್ರಮಾದದ ಬಗ್ಗೆ ಅರಿವಾಗಿದೆ.

 

ಇಲ್ಲಿ ನಡೆದಿರುವುದು ಆಧಾರ್ ಕಾರ್ಡ್ ಪ್ರಮಾದ. ಏನಿದೆ ಆಧಾರ್ ಕಾರ್ಡ್ ವಿಷಯ ಅಂತೀರಾ? ಬನ್ನಿ ತಿಳಿಯೋಣ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ರಾಯ್ ಪುರ ಗ್ರಾಮದಲ್ಲಿ. ದಿನೇಶ್ ಎಂಬ ತಂದೆ ತನ್ನ ಮಗಳನ್ನು ಶಾಲೆಗೆ ಸೇರಿಸಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಆಧಾರ್ ಕಾರ್ಡ್ ಮಾಡಿಸಬೇಕು ಎಂಬ ಸೂಚನೆ ಮೇರೆಗೆ ದಿನೇಶ್ ಮಗಳಿಗೆ ಕೆಲ ತಿಂಗಳ ಹಿಂದೆ ಕಾರ್ಡ್ ಕೂಡಾ ಮಾಡಿಸಿದ್ದಾರೆ.

ಈ ಕಾರ್ಡ್‌ನಲ್ಲಿರುವ ದಾಖಲಾತಿಗಳು ಸರಿಯಾಗಿದೆಯಾ ಎಂದು ನೋಡಲು ತಂದೆ ತಾಯಿ ಹೋಗಿಲ್ಲ. ಕೂಲಿ ಕೆಲಸ ಮಾಡುವ ಪೋಷಕರಿಗೆ ಇದರ ಅರಿವೂ ಇರಲಿಲ್ಲ.ಹಾಗಾಗಿ ಹೊಸ ಆಧಾರ್ ಕಾರ್ಡ್ ಹಿಡಿದುಕೊಂಡು ಶಾಲೆಗೆ ಮಗಳನ್ನು ಸೇರಿಸಲು ಹೋದ ದಿನೇಶ್‌ಗೆ ಆಘಾತ ಕಾದಿತ್ತು. ಮಗಳು ಆರತಿಯ ಹೆಸರನ್ನು ಆಧಾರ್ ಕಾರ್ಡ್‌ನಲ್ಲಿ ಮಧು ಅವರ 5 ನೇ ಮಗು (ಮಧು ಕಾ ಪಾಂಚ್ವಾ ಬಚ್ಚಾ) ಎಂದು ಹಿಂದಿಯಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಆಧಾರ್ ಕಾರ್ಡ್ ನಂಬರ್ ಕೂಡ ಸರಿಯಾಗಿಲ್ಲ.

ಹೀಗಾಗಿ ಶಾಲಾ ಶಿಕ್ಷಕಿ ಎಕ್ತಾ ವರ್ಶ್ನೆ ಪ್ರವೇಶ ನೀಡಲು ನಿರಾಕರಣೆ ಮಾಡಿದ್ದಾರೆ. ಮೊದಲು ಆಧಾರ್ ಕಾರ್ಡ್ ಸರಿ ಮಾಡಿಸಿಕೊಂಡು ಬನ್ನಿ ಎಂದು ವಾಪಾಸ್ ಕಳುಹಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಆಧಾರ್ ಕಾರ್ಡ್ ಫೋಟೋ ವೈರಲ್ ಆಗಿದೆ.

ಈ ವಿಚಾರ ವೈರಲ್ ಆಗಿದ್ದರಿಂದ, ಜಿಲ್ಲಾಧಿಕಾರಿ ದೀಪಾ ರಂಜನ್ ಗಮನಕ್ಕೆ ಬಂದಿದೆ. ತಕ್ಷಣವೇ ಆಧಾರ್ ಕಾರ್ಡ್ ಸರಿಪಡಿಸಿ ಕೊಡಲು ಸೂಚಿಸಿದ್ದಾರೆ. ಬಳಿಕ ಶಾಲೆ ಜೊತೆಗೂ ಮಾತನಾಡಿರುವ ಜಿಲ್ಲಾಧಿಕಾರಿ ಆಧಾರ್ ಕಾರ್ಡ್ ಸರಿಪಡಿಸಿದ ಬೆನ್ನಲ್ಲೇ ಶಾಲೆಗೆ ದಾಖಲಾತಿ ಮಾಡುವಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಈ ತಪ್ಪು ಮಾಡಿದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ನೀಡುವಂತೆ ಸೂಚಿಸಿದ್ದಾರೆ.

Leave A Reply

Your email address will not be published.