ಮುಕ್ಕೂರು : ವೈಯಕ್ತಿಕ ಅಪಘಾತ ಉಚಿತ ವಿಮಾ ಪಾಲಿಸಿ ವಿತರಣೆ
ಕ್ಲಪ್ತ ಸಮಯದಲ್ಲಿ ಪಾಲಿಸಿ ನೀಡುತ್ತಿರುವುದು ಪ್ರಶಂಸನೀಯ : ಕುಂಬ್ರ ದಯಾಕರ ಆಳ್ವ
ಊರವರ ಪ್ರೋತ್ಸಾಹದಿಂದ ಯಶಸ್ಸು ದೊರೆತಿದೆ : ಜಗನ್ನಾಥ ಪೂಜಾರಿ ಮುಕ್ಕೂರು
ಪ್ರತಿ ಸಂಘಟನೆಗಳಿಗೆ ಮಾದರಿ ಆಗುವಂತಹ ಕಾರ್ಯಕ್ರಮ : ರಾಮಚಂದ್ರ ಕೋಡಿಬೈಲು
ಕುಟುಂಬಕ್ಕೆ ಭದ್ರತೆ ಒದಗಿಸುವಂತಹ ಶ್ರೇಷ್ಠ ಕಾರ್ಯ : ಉಮೇಶ್ ಕೆಎಂಬಿ
ಮುಕ್ಕೂರು : ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಾಮಾಜಿಕ ಕಾರ್ಯ ಚಟುವಟಿಕೆ ಭಾಗವಾಗಿ ಮುಕ್ಕೂರು ವಾರ್ಡ್‌ನಲ್ಲಿ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯದಡಿ ಉಚಿತ ವಿಮಾ ನೋಂದಣಿ ಮಾಡಿಕೊಂಡ 145 ಮಂದಿಗೆ ವಿಮಾ ಪಾಲಿಸಿ ವಿತರಣೆ ಎಪ್ರಿಲ್ 2 ರಂದು ನಡೆಯಿತು.
ಕುಂಡಡ್ಕದಲ್ಲಿ ವಿತರಣೆಗೆ ಚಾಲನೆ ನೀಡಿದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಸಂಘ ಸಂಸ್ಥೆಯೊಂದರ ಸಮಾಜಪರ ಕಾಳಜಿಗೆ ಈ ಉಚಿತ ವಿಮಾ ಸೌಲಭ್ಯ ನೀಡುವ ಕಾರ್ಯಕ್ರಮ ಉದಾಹರಣೆ ಆಗಿದೆ. ನೋಂದಣಿ ಮಾಡಿ ಕ್ಲಪ್ತ ಸಮಯದಲ್ಲಿ ಪಾಲಿಸಿ ಮಾಡಿಸಿ ಫಲಾನುಭವಿಗಳಿಗೆ ನೀಡಿರುವ ನೇಸರ ಮತ್ತು ಗಣೇಶೋತ್ಸವ ಸಮಿತಿಯ ಕಾರ್ಯ ಪ್ರಶಂಸನೀಯ ಎಂದರು.
ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸಂಘ ಸಂಸ್ಥೆಗಳ ಮುಖ್ಯ ಗುರಿ ಸಮಾಜ ಸೇವೆ. ಜನರ ದೈನಂದಿನ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ಅಥವಾ ಸರಕಾರೇತರ ಸೌಲಭ್ಯಗಳನ್ನು ತಲುಪಿಸುವ ಕಾರ್ಯವನ್ನು ನೇಸರ ಬಳಗ ಸದಾ ಕಾಲ ಹಮ್ಮಿಕೊಂಡಿದೆ. ಇದಕ್ಕೆ ಊರವರು ಪ್ರೋತ್ಸಾಹ ನೀಡುತ್ತಿರುವುದರಿಂದ ನಿರಂತರವಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ ಎಂದರು.
ಪೆರುವೋಡಿಯಲ್ಲಿ ವಿಮಾ ಪಾಲಿಸಿ ಹಸ್ತಾಂತರಿಸಿ ಮಾತನಾಡಿದ ಪ್ರಗತಿಪರ ಕೃಷಿಕ ರಾಮಚಂದ್ರ ಕೋಡಿಬೈಲು, ನೇಸರ ಯುವಕ ಮಂಡಲ, ಗಣೇಶೋತ್ಸವ ಸಮಿತಿ ವತಿಯಿಂದ ವೈಯಕ್ತಿಕ ಅಪಘಾತ ವಿಮೆ ನೀಡುವ ಕಾರ್ಯಕ್ರಮ ಪ್ರತಿ ಸಂಘಟನೆಗಳಿಗೆ ಮಾದರಿ ಆಗುವಂತಹದು. ಇಂತಹ ಸಾಮಾಜಿಕ ಬದ್ಧತೆಯ ಚಟುಚಟಿಕೆ ನಿರಂತರವಾಗಿ ಸಾಗಲಿ ಎಂದರು.
ಕಾನಾವು ಕುವೆತ್ತಡ್ಕದಲ್ಲಿ ವಿಮಾ ಪಾಲಿಸಿ ಹಸ್ತಾಂತರಿಸಿದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಜನರ ಆರೋಗ್ಯದ ಬಗ್ಗೆಯು ಸಂಘಟನೆ ಕಾಳಜಿ ವಹಿಸಿ ವಿಮೆ ಸೌಲಭ್ಯದ ಮೂಲಕ ಭದ್ರತೆ ಒದಗಿಸಿರುವುದು ಪ್ರಶಂನೀಯ ಸಂಗತಿ ಎಂದರು.
ಬೀರುಸಾಗಿನಲ್ಲಿ ವಿಮಾ ಪಾಲಿಸಿ ವಿತರಿಸಿದ ಪ್ರಗತಿಪರ ಕೃಷಿಕ ಸಂಜೀವ ಗೌಡ ಬೈಲಂಗಡಿ ಶುಭ ಹಾರೈಸಿದರು. ಅಡ್ಯತಕಂಡ, ಮುಕ್ಕೂರಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ ವಿಮಾ ಪಾಲಿಸಿ ವಿತರಿಸಿದರು.
10 ಮಂದಿಗೆ ವಿಮೆ : ಘೋಷಣೆ
ಇದೇ ಸಂದರ್ಭದಲ್ಲಿ ಕುಂಬ್ರ ದಯಾಕರ ಆಳ್ವ ಅವರು ಹತ್ತು ಮಂದಿಯ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯ ಪ್ರಥಮ ಕಂತನ್ನು ವೈಯಕ್ತಿಕ ನೆಲೆಯಲ್ಲಿ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಪೆರುವಾಜೆ ಗ್ರಾ.ಪಂ.ಮಾಜಿ ಸದಸ್ಯ ಚನಿಯ ಕುಂಡಡ್ಕ, ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸದಸ್ಯರಾದ ರಾಮಚಂದ್ರ ಚೆನ್ನಾವರ, ರವಿ ಕುಂಡಡ್ಕ, ವಸಂತ ಕುಂಡಡ್ಕ, ವೆಂಕಟರಮಣ ಕುಂಡಡ್ಕ ಹಾಗೂ ವಿವಿಧ ಭಾಗದ ಫಲಾನುಭವಿಗಳು ಉಪಸ್ಥಿತರಿದ್ದರು. ಕುಂಡಡ್ಕ- ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ ಸ್ವಾಗತಿಸಿ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು. ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್.ನಿರೂಪಿಸಿದರು.
145 ಮಂದಿಗೆ ಸೌಲಭ್ಯ
ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್ ನ ಸಹಭಾಗಿತ್ವದಲ್ಲಿ 60 ವರ್ಷದ ಒಳಗಿನ ವ್ಯಕ್ತಿಗೆ 2.5 ಲಕ್ಷ ರೂ.
ವಾರ್ಷಿಕ ವಿಮಾ ಸೌಲಭ್ಯದಡಿ 125 ಮಂದಿಗೆ ಹಾಗೂ 10 ಲಕ್ಷ ರೂ. ವಿಮಾ ಸೌಲಭ್ಯದಡಿ 20 ಮಂದಿಗೆ ಸೇರಿದಂತೆ ಒಟ್ಟು 145 ಮಂದಿಗೆ ವಿಮಾ ಪಾಲಿಸಿ ನೀಡಲಾಯಿತು.
35 ಸಾವಿರ ರೂ.ವೆಚ್ಚ
ಪ್ರಥಮ ಸುತ್ತಿನಲ್ಲಿ 145 ಮಂದಿಯ ವಿಮೆಗೆ ತಗಲುವ ಪ್ರಥಮ ವರ್ಷದ ಮೊತ್ತವನ್ನು ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ತನ್ನ ಉಳಿತಾಯ ನಿಧಿಯಿಂದ ಭರಿಸಿದ್ದು ಇದಕ್ಕಾಗಿ 35 ಸಾವಿರ ರೂ.ವ್ಯಯಿಸಿದೆ.