ಬೆಳ್ತಂಗಡಿ: ಗುರುವಾಯನಕೆರೆಯ ಮೀನುಗಳ ಮಾರಣಹೋಮ ಪ್ರಕರಣ | ಗ್ರಾಮಪಂಚಾಯತ್ ಕೈಸೇರಿದ ನೀರು ಪರೀಕ್ಷೆಯ ಪ್ರಾಥಮಿಕ ವರದಿ | ವರದಿಯಲ್ಲೇನಿದೆ ಗೊತ್ತಾ??
ಇಲ್ಲಿ ನಡೆಯಿತು 14 ಕ್ವಿಂಟಾಲ್‌ಗೂ ಹೆಚ್ಚು ಮೀನುಗಳ ಮಾರಣ ಹೋಮ. ದುರ್ವಾಸನೆಯಿಂದ ಆತಂಕಗೊಂಡಿದ್ದರು ಕೆರೆಮೇಲ್ ಜನತೆ. ನೀರು ಮಲಿನ ಆಗುವುದಕ್ಕೆ ಖಾಸಗಿ ಕಾಲೇಜಿನವರೇ ಕಾರಣ ಎಂದು ಹೇಳುತ್ತಿತ್ತು ಒಂದು ಗುಂಪು. ಇಲ್ಲ ಈ ನೀರಿಗೆ ಯಾರೋ ವಿಷ ಹಾಕಿದ್ದಾರೆ ಅಂತ ಹೇಳುವವರು ಇನ್ನು ಕೆಲವರು. ಮೀನುಗಾರರ ನಡುವೆಯೇ ಏನೋ ನಡೆದಿದೆ, ಅವರಿಂದಲೇ ನೀರು ಮಲಿನವಾಗಿದೆ ಎಂದು ಆರೋಪಿಸುವವರ ದಂಡೇ ಇನ್ನೊಂದೆಡೆ.
ಇದೆಲ್ಲದರ ನಂತರ ಗುರುವಾಯನಕೆರೆಯ ಮೀನುಗಳ ಮಾರಣ ಹೋಮ ಸುದ್ದಿ ಸೈಲೆಂಟ್ ಆಗಿತ್ತು. ಕುವೆಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಎರಡು ಸಂಸ್ಥೆಗಳಿಗೆ ಗುರುವಾಯನಕೆರೆಯ ನೀರು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಈ ಮಾರಣಹೋಮದ ಹಿಂದಿರುವ ಕಾರಣ ಹೊರಬಿದ್ದಿದ್ದು, ಕೆರೆಯ ನೀರಿನಲ್ಲಿ ಆಮ್ಲಜನಕದ ಕೊರತೆಯಿಂದ ಮೀನುಗಳು ಸಾಯುತ್ತಿವೆ ಎನ್ನುವುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಈ ಕೃತ್ಯದ ನಂತರ ಗುರುವಾಯನಕೆರೆಯ ನೀರನ್ನು ಕುವೆಟ್ಟು ಗ್ರಾಮ ಪಂಚಾಯತ್ ಪರೀಕ್ಷೆಗೆಂದು ಮಂಗಳೂರಿನ ಖಾಸಗಿ ಲ್ಯಾಬ್ ಗೆ ಕಳುಹಿಸಲಾಗಿತ್ತು. ನಂತರ ಮೀನುಗಾರಿಕಾ ಕಾಲೇಜಿನವರು ಬಂದು ನೀರು, ಮಣ್ಣು ಹಾಗೂ ಸತ್ತ ಮೀನುಗಳನ್ನು ಪರೀಕ್ಷೆಗೆಂದು ತೆಗೆದುಕೊಂಡು ಹೋಗಿದ್ದರು. ಇದೀಗ ಖಾಸಗಿ ಸಂಸ್ಥೆ ಮತ್ತು ಮೀನುಗಾರಿಕಾ ಕಾಲೇಜಿನವರು ನಡೆಸಿರುವ ನೀರು ಪರೀಕ್ಷೆಯ ವರದಿ ಗ್ರಾಮ ಪಂಚಾಯತ್ ಕೈ ಸೇರಿದೆ.
ಇದರಲ್ಲಿ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗಿರುವ ಕಾರಣವನ್ನು ತಿಳಿಸಲಾಗಿತ್ತು. ಅಲ್ಲದೇ ನೈಟ್ರೇಟ್, ಅಮೋನಿಯಾ ಮುಂತಾದ ಅಂಶಗಳು ನೀರಿನಲ್ಲಿ ಪತ್ತೆಯಾಗಿವೆ ಎಂಬ ವಿಚಾರವೂ ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಆದರೆ ಈ ಆಮ್ಲಜನಕ ಹೆಚ್ಚಾಗಲು ಕಾರಣವೇನು ? ಯಾವ ಕಾರಣಕ್ಕಾಗಿ ನೀರು ಮಲಿನವಾಗಿದೆ? ಮೀನುಗಳ ಸಾವಿಗೆ ನೀರಿನ ಪರೀಕ್ಷೆಯಲ್ಲಿ ಕಾರಣವೇನಾದರೂ ಸಿಕ್ಕಿದ್ಯಾ ಎನ್ನುವ ಕುರಿತು ಮಾಹಿತಿ ತಿಳಿದುಬಂದಿಲ್ಲ.
ಆಕ್ಸಿಜನ್ ಪ್ರಮಾಣ ನೀರಿನ ಸ್ಯಾಂಪಲ್ 1 ರಲ್ಲಿ 31. 50, ಸ್ಯಾಂಪಲ್ 2ರಲ್ಲಿ 31. 20 ಮತ್ತು 3ನೇ ಸ್ಯಾಂಪಲ್ ನಲ್ಲಿ 31. 40 ಯಷ್ಟಿದೆ ಎಂದು ವರದಿಯಲ್ಲಿದೆ. ಇನ್ನು ಡಿಸಾಲ್ವುಡ್ ಆಕ್ಸಿಜನ್ 5 ರಿಂದ 9 ರಷ್ಟಿರಬೇಕಿತ್ತು, ಆದರೆ ಇಲ್ಲಿ 3. 84, 4. 07 ಮತ್ತು 4.10ರಷ್ಟಿದೆ. ಆದರೆ ಇಲ್ಲಿ ಅದರ ಲೆವೆಲ್ ಕೂಡ 2.10,2.25,2.10 ರಷ್ಟಿದೆ ಎಂದು ಕೊಡಲಾಗಿದೆ. ಇವೆಲ್ಲ ಅಂಕಿ ಅಂಶಗಳನ್ನು ನೋಡಿದಾಗ ನೀರಿನಲ್ಲಿ ಆಮ್ಲಜನಕದ ಕೊರತೆಯಿದೆ. ಈ ಕಾರಣಕ್ಕಾಗಿಯೇ ಮೀನುಗಳು ಸಾವನ್ನಪ್ಪಿದ್ದವು ಎಂದು ತಿಳಿದುಬರುತ್ತದೆ.