ಪುತ್ತೂರು: ಸ್ಕೂಟರ್ ಸವಾರನಿಗೆ ‘ವಿತ್ ಔಟ್ ಸೀಟ್ ಬೆಲ್ಟ್’ಎಂದು ಫೈನ್ ಹಾಕಿದ ಪೊಲೀಸ್!!
ಪುತ್ತೂರು:ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸಿಲ್ಲ ಅಂತಾ ಫೈನ್ ಹಾಕೋದು ನೋಡಿದ್ದೀವಿ. ಹತ್ತೂರಿನಲ್ಲಿ ಟ್ರಾಫಿಕ್ ರೂಲ್ಸ್ ಒಂದಿದ್ರೆ, ಪುತ್ತೂರಿನಲ್ಲಿ ಬೇರೆಯದೇ ನಿಯಮ. ಅಲ್ಲಿನ ಟ್ರಾಫಿಕ್ ಪೊಲೀಸರು ಎಷ್ಟರಮಟ್ಟಿಗೆ ಕಟ್ಟುನಿಟ್ಟು ಎಂದರೆ, ಪುತ್ತೂರಿನಲ್ಲಿ ಸ್ಕೂಟರ್ ಸವಾರ ಕೂಡಾ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ !!
ಹೌದು ಮಾರಾಯರೇ, ಇಲ್ಲಿ ಪುತ್ತೂರಿನಲ್ಲಿ ಸ್ಕೂಟರ್ ಸವಾರನೊಬ್ಬನಿಗೆ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ದಂಡದ ಚೀಟಿ ಹರಿದ ವಿಚಿತ್ರ ಘಟನೆಯೊಂದು ನಡೆದಿದೆ.
ಮಾರ್ಚ್ 17 ರಂದು ಕೊಡಿಪ್ಪಾಡಿ ನಿವಾಸಿ ಬೆಳಿಯಪ್ಪ ಗೌಡ ಎಂಬವರು ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಪೊಲೀಸರು ಅವರ ಸ್ಕೂಟರ್ ನ್ನು ನಿಲ್ಲಿಸಿ ದಾಖಲೆ ಪತ್ರ ಪರಿಶೀಲಿಸಿ ನಂಬರ್ ಪ್ಲೇಟ್ ಸರಿ ಇಲ್ಲ ಎಂದು 500 ರೂಪಾಯಿ ದಂಡ ಹಾಕಿ, ರಶೀದಿ ನೀಡಿದ್ದಾರೆ. ಆ ರಶೀದಿಯಲ್ಲಿ ವಿತ್ ಔಟ್ ಸೀಟ್ ಬೆಲ್ಟ್ ಎಂದು
ಬರೆಯಲಾಗಿತ್ತು. ಅದಲ್ಲದೇ 23-02-2021 ಎಂದು ದಿನಾಂಕ ನಮೂದಿಸಿದ್ದ ರಶೀದಿ ನೀಡಿ ಪುಸಲಾಯಿಸಿದ್ದಾರೆ.
ಬಳಿಕ ಬೆಳಿಯಪ್ಪ ಗೌಡ ಅವರು ತಮ್ಮ ಪರಿಚಯದ ನಗರಸಭಾ ಸದಸ್ಯರೊಬ್ಬರ ಗಮನಕ್ಕೆ ತಂದು,ವಿಚಾರಿಸಲೆಂದು ಮಹಿಳಾ ಠಾಣೆಗೆ ತೆರಳಿದ್ದಾರೆ. ಈ ಬಗ್ಗೆ ಎಸ್.ಐ ಅವರಲ್ಲಿ ವಿಚಾರಿಸಿದಾಗ ಅವರು ಸರಿಯಾಗಿ ಪ್ರತಿಕ್ರಿಯೆ ನೀಡದ ಕಾರಣ ನಗರಸಭಾ ಸದಸ್ಯ ಹಾಗೂ ಎಸ್.ಐ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಬಳಿಕ ನಗರ ಠಾಣೆಯ ಇನ್ಸ್ ಪೆಕ್ಟರ್ ಸುನೀಲ್ ಅವರು ಆಗಮಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸ್ಕೂಟರ್ ಸವಾರ ನಿಗೆ ಬೆಲ್ಟ್ ಇಲ್ಲ ಎಂದು ಬರೆದು ಹರಿದ ಚೀಟಿ ಸೋಷಿಯಲ್ ಮೀಡಿಯಾದಲ್ಲಿ ಛಿಂದಿ ಚೂರಾಗಿ ಹಂಚಲ್ಪಟ್ಟು ಪುತ್ತೂರು ಪೊಲೀಸರ ಕಾರ್ಯಾಚರಣೆ ಗೇಲಿಗೆ ಒಳಗಾಗಿದೆ.