ದೈಹಿಕ ಶಿಕ್ಷಣ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ!!|ಮುಖ್ಯ ಶಿಕ್ಷಕರ, ಉಪ ಪ್ರಾಂಶುಪಾಲರ ಹುದ್ದೆಗೂ ಇದೆ ಅವಕಾಶ
ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ, ಉಪ ಪ್ರಾಂಶುಪಾಲರ ಹುದ್ದೆಗಳು ಖಾಲಿಯಿದ್ದಲ್ಲಿ, ಆ ಹುದ್ದೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ಸೇವಾ ಜೇಷ್ಠತಾ ಆಧಾರದ ಮೇಲೆ, ಇನ್ಮುಂದೆ ಪ್ರಭಾರದಲ್ಲಿರಿಸಲು ಸರ್ಕಾರ ಅನುಮತಿಸಿದೆ.
ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಆಯುಕ್ತರಿಗೆ ಪತ್ರದಲ್ಲಿ ಸೂಚಿಸಿದ್ದು, ‘ಸರ್ಕಾರಿ, ಅನುದಾನಿತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ, ಉಪ ಪ್ರಾಂಶುಪಾಲರ ಹುದ್ದೆಗಳು ಖಾಲಿಯಿದ್ದಲ್ಲಿ, ಸೇವಾ ಜೇಷ್ಠತಾ ಆಧಾರದ ಮೇಲೆ ದೈಹಿಕ ಶಿಕ್ಷಕರುಗಳನ್ನು, ಕರ್ನಾಟಕ ಸೇವಾ ನಿಯಮಾವಳಿ ನಿಯಮ-1958ರ ನಿಯಮ-68ರನ್ವಯ ಅಧಿಕ ಪ್ರಭಾರದಲ್ಲಿರಿಸಲು, ಸರ್ಕಾರ ಅನುಮೋದನೆ ನೀಡಿದೆ’ ಎಂದು ನಿರ್ದೇಶಿಸಿದ್ದಾರೆ.
ಇದುವರೆಗೆ ಸರ್ಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರು, ಉಪ ಪ್ರಾಂಶುಪಾಲರು ಇಲ್ಲದೇ ಇದ್ದಾಗ, ಇತರೆ ವಿಷಯ ಶಿಕ್ಷಕರಿಗೆ ಪ್ರಭಾರ ಕಾರ್ಯಭಾರವನ್ನು ನೀಡಲಾಗುತ್ತಿತ್ತು.ಇನ್ನು ಮುಂದೆ ದೈಹಿಕ ಶಿಕ್ಷಕರಿಗೆ ಈ ಹುದ್ದೆಗಳಿಗೆ ಪ್ರಭಾರ ಜವಾಬ್ದಾರಿ ನೀಡುವ ಸರ್ಕಾರ ಅನುಮತಿ ನೀಡಿದೆ.