ಪ್ಯಾಲೆಸ್ತೀನ್ ನ ಕಚೇರಿಯೊಳಗೆ ಭಾರತೀಯ ರಾಯಭಾರಿ ನಿಗೂಢ ಸಾವು !! | ತನಿಖೆಗೆ ಆದೇಶಿಸಿದ ಪ್ಯಾಲೆಸ್ತೀನ್ ಸರ್ಕಾರ
ಪ್ಯಾಲೆಸ್ತೀನ್ ನಿಂದ ಭಾರತಕ್ಕೆ ಆಘಾತಕಾರಿ ವಿಷಯವೊಂದು ಹೊರಬಿದ್ದಿದ್ದು, ಪ್ಯಾಲೆಸ್ತೀನ್‌ನಲ್ಲಿದ್ದ ಭಾರತೀಯ ರಾಯಭಾರಿ ಮುಕುಲ್ ಆರ್ಯ ಅವರು ರಾಮಲ್ಲಾದಲ್ಲಿರುವ ರಾಯಭಾರ ಕಚೇರಿಯಲ್ಲಿ ಭಾನುವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಆರ್ಯ ರಾಯಭಾರ ಕಚೇರಿಯೊಳಗೆ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿನ ಬಗ್ಗೆ ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ಪ್ಯಾಲೆಸ್ಟೈನ್ ಮಾಧ್ಯಮಗಳು ವರದಿ ಮಾಡಿವೆ.
ಆರ್ಯ ಅವರ ನಿಧನಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ. “ರಾಮಲ್ಲಾದಲ್ಲಿ ಭಾರತದ ಪ್ರತಿನಿಧಿಯಾದ ಮುಕುಲ್ ಆರ್ಯ ಅವರ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಗಿದೆ. ಅವರು ಪ್ರತಿಭಾವಂತ ಅಧಿಕಾರಿಯಾಗಿದ್ದರು” ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಈ ಸುದ್ದಿ ಬಂದ ತಕ್ಷಣ, ಅಧ್ಯಕ್ಷ ಮಹಮೂದ್ ಅಬ್ಬಾಸ್ ಮತ್ತು ಪ್ರಧಾನ ಮಂತ್ರಿ ಡಾ. ಮುಹಮ್ಮದ್ ಶ್ತಯ್ಯೆ ಅವರು ಆರೋಗ್ಯ ಮತ್ತು ಫೋರೆನ್ಸಿಕ್ ಮೆಡಿಸಿನ್ ಸಚಿವಾಲಯದ ಜೊತೆಗೆ ಎಲ್ಲಾ ಭದ್ರತೆ, ಪೊಲೀಸ್ ಮತ್ತು ಸಾರ್ವಜನಿಕ ಅಧಿಕಾರಿಗಳಿಗೆ ತಕ್ಷಣದ ಸೂಚನೆಗಳನ್ನು ನೀಡಿದ್ದಾರೆ. ಭಾರತೀಯ ರಾಯಭಾರಿಯ ನಿವಾಸದ ಸ್ಥಳ, ಸಾವಿನ ಪ್ರಕರಣವನ್ನು ತನಿಖೆ ನಡೆಸಲಾಗುತ್ತದೆ. ಎಲ್ಲ ರೀತಿಯ ಸಹಕಾರವನ್ನು ನೀಡಲಾಗುತ್ತದೆ ಪ್ಯಾಲೆಸ್ತೀನ್ ಸರ್ಕಾರ ತಿಳಿಸಿದೆ.
2008ನೇ ಬ್ಯಾಚಿನ ಐಎಫ್‌ಎಸ್ ಅಧಿಕಾರಿಯಾಗಿದ್ದ ಆರ್ಯ ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕಾರಿಯಾಗಿ, ಯುನೆಸ್ಕೋ ಭಾರತ ನಿಯೋಗದ ಕಾಯಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅವರ ಸಾವು ಭಾರತಕ್ಕೆ ತುಂಬಲಾರದ ನಷ್ಟವಾಗಿದೆ.