

ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ. ಅಲ್ಲಿ ಪ್ರೀತಿ, ಆರೈಕೆ, ಅಕ್ಕರೆಯ ಜೊತೆಗೆ ನಂಬಿಕೆಯೂ ಬಹಳ ಮುಖ್ಯ. ಮನುಷ್ಯರಿಂದ ನನಗೆ ತೊಂದರೆಯಾಗದು ಎಂಬ ನಂಬಿಕೆ ಪ್ರಾಣಿಗಳಿಗೂ, ಈ ಪ್ರಾಣಿ ನನಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಎಂಬ ನಂಬಿಕೆ ಮನುಷ್ಯನಿಗೂ ಇದ್ದಾಗ ಮಾತ್ರ ಪರಸ್ಪರ ಸಂಬಂಧ ಚೆನ್ನಾಗಿರಲು ಸಾಧ್ಯ. ಹಾಗೆಯೇ ಪ್ರಾಣಿಗಳ ಜೀವವನ್ನು ಮಾನವರು ವೀರೋಚಿತವಾಗಿ ಉಳಿಸಿದ ಹಲವು ಸಂದರ್ಭಗಳಿವೆ. ಅಂಥದ್ದೇ ಒಂದು ಘಟನೆ ಮತ್ತೆ ಬೆಳಕಿಗೆ ಬಂದಿದ್ದು, ಈ ಬಾರಿ ಆಳವಾದ ಕಂದಕದಲ್ಲಿ ಬಿದ್ದಿದ್ದ ಆನೆಯನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಈ ಕುರಿತಾದ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಇಡೀ ಘಟನೆಯ ವಿಶೇಷವೆಂದರೆ ಆರ್ಕಿಮಿಡಿಸ್ ತತ್ವವನ್ನು ಅನ್ವಯಿಸಿ ಆನೆಯನ್ನು ಉಳಿಸಲಾಗಿದೆ. ಏನಿದು ಪ್ರಕರಣ ?? ಇಲ್ಲಿದೆ ನೋಡಿ.
ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಆನೆಯೊಂದು ನಾಲೆಗೆ ಬಿದ್ದ ಘಟನೆ ಸಂಭವಿಸಿದೆ. ಹೊಂಡ ತುಂಬಾ ಆಳವಾಗಿದ್ದರಿಂದ ಆನೆ ನಾಲೆಯಲ್ಲಿಯೇ ಸಿಕ್ಕಿಬಿದ್ದಿದೆ. ಆನೆಯನ್ನು ರಕ್ಷಿಸುವ ಸಲುವಾಗಿ ಅರಣ್ಯ ರಕ್ಷಕರ ತಂಡ ಕುತೂಹಲಕಾರಿಯಾಗಿ ಹೊಂಡಕ್ಕೆ ನೀರನ್ನು ತುಂಬಿಸಿದ್ದಾರೆ. ಹಳ್ಳಕ್ಕೆ ನೀರು ತುಂಬಿಸಿದ್ದರಿಂದ ಆನೆ ಮೇಲಕ್ಕೆ ಈಜಲು ಸಹಾಯ ಮಾಡಿತು. ನಂತರ ಹಗ್ಗಗಳ ಸಹಾಯದಿಂದ ತಂಡವು ಆನೆಯನ್ನು ನಾಲೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.
ಘಟನೆಯ ಸಂಪೂರ್ಣ ವೀಡಿಯೊವನ್ನು IFS ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಳ್ಳುವಾಗ, “ಮಿಡ್ನಾಪುರ್ ನಲ್ಲಿ ಆನೆಯೊಂದು ಕಂದಕಕ್ಕೆ ಬಿದ್ದಿತು. ಈಗ ಅದನ್ನು ಆರ್ಕಿಮಿಡಿಸ್ ತತ್ವವನ್ನು ಅನ್ವಯಿಸುವ ಮೂಲಕ ಉಳಿಸಲಾಗಿದೆ. ವಿಶ್ವಾಸವಿಡಲು ಈ ವಿಡಿಯೋ ನೋಡಿ..” ಎಂದು ಬರೆದುಕೊಂಡಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಮುಂಜಾನೆ 4 ಗಂಟೆಯ ಹೊತ್ತಿಗೆ ಅದನ್ನು ಪೂರ್ಣಗೊಳಿಸಲಾಯಿತು ಎಂದು ಅಧಿಕಾರಿ ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. DFO ಸಂದೀಪ್ ಬೆರ್ವಾಲ್ ಮತ್ತು ADFO ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.













