ಎರಡನೇ ಮಗುವನ್ನು ಸ್ವಾಗತಿಸಲು 5 ವಾರಗಳ ಪಿತೃತ್ವ ರಜೆ ಪಡೆದುಕೊಂಡ ಟ್ವಿಟ್ಟರ್ ಸಿಇಓ ಪರಾಗ್ ಅಗರವಾಲ್! ಭಾರತ ಮೂಲದ ಸಿಇಓಗೆ ನೆಟಿಜನ್ ಗಳಿಂದ ಸಿಕ್ಕಾಪಟ್ಟೆ ಹೊಗಳಿಕೆ
ನೂತನ ಸಿಇಓ ಆಗಿ ಮೂರು ತಿಂಗಳ ಹಿಂದೆ ನೇಮಕಗೊಂಡಿದ್ದ ಭಾರತ ಮೂಲದ ಪರಾಗ್ ಅಗರವಾಲ್ ಈಗ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಮಗುವನ್ನು ಸ್ವಾಗತಿಸುವ ಸಲುವಾಗಿ 5 ವಾರಗಳ ಪಿತೃತ್ವ ರಜೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.
37 ವರ್ಷದ ಪರಾಗ್ ಅವರು ಕೆಲವು ವಾರಗಳ ವಿರಾಮವನ್ನು ತನ್ನ ಎರಡನೇ ಮಗುವನ್ನು ಸ್ವಾಗತಿಸುವ ಸಲುವಾಗಿ ಪಿತೃತ್ವ ರಜೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ” ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವ ಉನ್ನತ ವ್ಯಕ್ತಿಯೊಬ್ಬರು ಪಿತೃತ್ವ ರಜೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಸೌಲಭ್ಯ ಕಂಪನಿಯಲ್ಲಿದೆ. ಇದು ಉಳಿದ ಎಲ್ಲಾ ಉದ್ಯೋಗಿಗಳಿಗೆ ಮಾದರಿಯಾಗಿದೆ. ಈ ರೋಮಾಂಚಕಾರಿ ಸುದ್ದಿಗೆ ನಿಮಗೆ ಅಭಿನಂದನೆಗಳು ಪರಾಗ್” ಎಂದು ಟ್ವೀಟ್ ಮಾಡಿದೆ.
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟಿಜನ್ ಗಳು ಪರಾಗ್ ಅವರನ್ನು ಹೊಗಳಿದ್ದಾರೆ. ತಂದೆಗೆ ಬೇಕಾದ ಪಿತೃತ್ವ ರಜೆಯ ಅಗತ್ಯವನ್ನು ಕೆಲವರು ಖುಷಿಪಟ್ಟರೆ, ಟ್ವಿಟ್ಟರ್ ನ ಸಿಇಓ ತೆಗೆದುಕೊಂಡ ನಿರ್ಧಾರ ತಂದೆಯಾಗುವ ಹಲವು ಮಂದಿಗೆ ತಮ್ಮ ಕುಟುಂಬಗಳಿಗೆ ಹೆಚ್ಚಿನ ಸಮಯವನ್ನು ನೀಡುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಿ ಕೊಡುತ್ತದೆ ಎಂದಿದ್ದಾರೆ.
ಕಳೆದ ವರ್ಷ ನವೆಂಬರ್ 29 ರಂದು ಜಾಕ್ ಡೊರ್ಸಿ ಅವರು ಟ್ವಿಟ್ಟರ್ ನ ಸಿಇಓ ಸ್ಥಾನದಿಂದ ಕೆಳಗಿಳಿದ ಮೇಲೆ ಭಾರತೀಯ ಮೂಲದ ಟೆಕ್ಕಿ ಪರಾಗ್ ಅವರನ್ನು ಸಿಇಓ ಆಗಿ ನೇಮಕ ಮಾಡಲಾಯಿತು.