ಶತಕದ ಜನ್ಮದಿನದ ಸಂಭ್ರಮಕ್ಕೆ 90 ವರ್ಷದ ಪತ್ನಿಯನ್ನು ಮರುಮದುವೆಯಾದ ತಾತ!! | ಅದ್ಧೂರಿ ಮದುವೆಗೆ ಸಾಕ್ಷಿಯಾದ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು
ಮನುಷ್ಯನಿಗೆ ಯಾವಾಗ ಸಾವು ಆವರಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಇರುವಷ್ಟು ದಿನ ಸಂತೋಷವಾಗಿರಬೇಕು. ಅಂತೆಯೇ ಇಲ್ಲೊಬ್ಬ ಅಜ್ಜ ತನ್ನ 100ನೇ ಹುಟ್ಟುಹಬ್ಬವನ್ನು ಆಚರಿಸುವ ವೇಳೆ 90 ವರ್ಷದ ಹೆಂಡತಿಯನ್ನು ಮರುಮದುವೆ ಮಾಡಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಹಳ್ಳಿಯೊಂದರ ನಿವಾಸಿ ಬಿಸ್ವನಾಥ್ ಸರ್ಕಾರ್, ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಲು 90 ವರ್ಷದ ಪತ್ನಿ ಸುರೋಧ್ವನಿ ಸರ್ಕಾರ್ ಅವರನ್ನು ಮರುಮದುವೆ ಮಾಡಿಕೊಂಡಿದ್ದಾರೆ. ಈ ಮದುವೆಯಲ್ಲಿ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಭಾಗವಹಿಸಿದ್ದರು. 100 ನೇ ವರ್ಷಕ್ಕೆ ಕಾಲಿಟ್ಟಾಗ ಬಿಸ್ವನಾಥ್ ಅವರಿಗೆ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದ ಕುಟುಂಬಸ್ಥರು ಈ ಯೋಚನೆ ಮಾಡಿದ್ದಾರೆ.
ವರನಾದ ಅಜ್ಜ ವಧು ಮನೆಗೆ ಕುದುರೆ-ಬಂಡಿಯಲ್ಲಿ ಪಟಾಕಿ ಸೌಂಡ್ ಮಧ್ಯೆ ಭರ್ಜರಿಯಾಗಿ ಎಂಟ್ರಿಕೊಟ್ಟರು. ದಂಪತಿ ಧೋತಿ-ಕುರ್ತಾ ಮತ್ತು ಸೀರೆಯನ್ನು ಧರಿಸಿ ಮದುವೆಗೆ ಸಿಂಗಾರಗೊಂಡಿದ್ದರು. ನೋಟುಗಳಿಂದ ಮಾಡಿದ ಹಾರಗಳನ್ನು ಬದಲಾಯಿಸಿಕೊಂಡರು. ನಂತರ ರುಚಿಯಾದ ಭೋಜನವನ್ನು ಏರ್ಪಡಿಸಲಾಗಿತ್ತು. ಈ ಸಂತೋಷದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ನೆರೆಹೊರೆಯವರನ್ನೂ ಆಹ್ವಾನಿಸಲಾಗಿತ್ತು.
ಮಾವನ ಮದುವೆ ಕುರಿತಾಗಿ ಮಾತನಾಡಿದ ಸೊಸೆ, ಬಿಸ್ವನಾಥ್ ಅವರು 6 ಮಕ್ಕಳು, 23 ಮೊಮ್ಮಕ್ಕಳು ಮತ್ತು 10 ಮರಿಮೊಮ್ಮಕ್ಕಳು ಉಪಸ್ಥಿತಿಯಲ್ಲಿ 90 ವರ್ಷದ ಪತ್ನಿ ಸುರೋಧ್ವನಿ ಅವರನ್ನು ಮರುಮದುವೆಯಾದರು. ಕೆಲವು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯದ್ದನ್ನು ನೋಡಿದಾಗ ಮರುಮದುವೆ ಮಾಡುವ ಆಲೋಚನೆ ತನಗೆ ಹೊಳೆದಿತ್ತು. ಈ ಬಗ್ಗೆ ನಾನು ಕುಟುಂಬಸ್ಥರಿಗೆ ಹೇಳಿದೆ. ಬೇರೆ ರಾಜ್ಯಗಳಲ್ಲಿ ವಾಸಿಸುವ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳು ಹಳ್ಳಿಗೆ ಬಂದರು. ಹೀಗಾಗಿ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ನಮ್ಮ ಅಜ್ಜಿ ಜಿಯಾಗಂಜ್‍ನ ಬೆನಿಯಾಪುಕುರ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಆದರೆ ನಮ್ಮ ಪೂರ್ವಜರ ಮನೆಯು ಸುಮಾರು ಐದು ಕಿಮೀ ದೂರದಲ್ಲಿರುವ ಬಮುನಿಯಾ ಗ್ರಾಮದಲ್ಲಿದೆ. ನನ್ನ ಅಜ್ಜಿಯನ್ನು ಎರಡು ದಿನಗಳ ಹಿಂದೆ ಅಲ್ಲಿಗೆ ಕರೆದೊಯ್ಯಲಾಯಿತು. ಅಜ್ಜಿ, ಅಜ್ಜನನ್ನು ಮದುವೆಗೆ ತಯಾರು ಮಾಡುವ ಜವಾಬ್ದಾರಿಯನ್ನು ಮೊಮ್ಮಕ್ಕಳು ವಹಿಸಿಕೊಂಡಿದ್ದೆವು ಎಂದು ಸಂತೋಷದಿಂದ ಒಬ್ಬ ಮೊಮ್ಮಗ ಹೇಳಿದ್ದಾನೆ.