ಮುಸ್ಲಿಂ ಕಾಂಗ್ರೆಸ್ ವಕ್ತಾರೆಯೊಬ್ಬರಿಂದ ಹಿಜಾಬ್ ಗೆ ವಿರೋಧ |’ಶಿಕ್ಷಣಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ, ಸಮವಸ್ತ್ರ ಸಮಾನತೆಯ ಅರ್ಥ’ ಎಂದು ಹೇಳಿಕೆ
ಹಿಜಾಬ್ ಕುರಿತು ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಸಮರ್ಥಿಸಿಕೊಂಡರೆ, ಕಾಂಗ್ರೆಸ್ ಮಾತ್ರ ಹಿಜಾಬ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ. ಆದರೆ ಮುಸ್ಲಿಂ ಕಾಂಗ್ರೆಸ್ ವಕ್ತಾರೆಯೊಬ್ಬರು ಹಿಜಾಬ್ ನಿಷೇಧದ ಪರ ಮಾತನಾಡಿದ್ದು, ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಭಾರತ ಪ್ರತಿಯೊಬ್ಬರಿಗೂ ಧರ್ಮಗಳ ಆಚರಣೆಗೆ ಅವಕಾಶ ನೀಡಿದೆ. ಆದರೆ ಧರ್ಮ ಮನೆಯೊಳಗೆ ಇರಬೇಕು. ಮನೆಯಿಂದ ಹೊರಗೆ ನಡೆಯುವಾಗ ನಾನೊಬ್ಬ ಭಾರತೀಯಳು ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಶಾಲಾ ಕಾಲೇಜುಗಳಲ್ಲಿನ ಹಿಜಾಬ್ ವಿವಾದದ ಕುರಿತು ಮಾತನಾಡಿದ ಸುರಯ್ಯ, ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯವಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿಸಲು ಪ್ರಯತ್ನಿಸಿದ್ದಾರೆ.
ನನ್ನ ಹಿಜಾಬ್ ನನ್ನ ಹಕ್ಕು. ಹಿಜಾಬ್ ನನ್ನ ಧರ್ಮದ ಪ್ರತೀಕ. ದೇಶ ನಮ್ಮ ಹಕ್ಕನ್ನು ಬಳಸಿಕೊಳ್ಳಲು ಮುಕ್ತವಾದ ಅವಕಾಶ ನೀಡಿದೆ. ಆದರೆ ನಮ್ಮ ಸಂವಿಧಾನ ನೀಡಿರುವ ಸ್ವತಂತ್ರವನ್ನು ನಾವು ದುರುಪಯೋಗ ಪಡಿಸಿಕೊಳ್ಳುತ್ತಿದ್ದೇವೆ ಎಂದರು. ವಿದ್ಯಾರ್ಥಿಗಳಿಗೆ ದೇಶದ ಮೇಲಿನ ಅಭಿಮಾನ ಕಡಿಮೆಯಾಗಿರುವುದೇ ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮದ ವಿಚಾರಕ್ಕೆ ಪ್ರತಿಭಟನೆಗಳು ನಡೆಯಲು ಮುಖ್ಯ ಕಾರಣ. ಶಿಕ್ಷಣಕ್ಕಿಂತ ಬೇರೆ ದೊಡ್ಡ ಧರ್ಮ ಇಲ್ಲ. ಧರ್ಮಕ್ಕಿಂತಲೂ ಮುಖ್ಯ ನನ್ನ ದೇಶ ಎಂದು ಹೇಳಿದರು.
ವಿದ್ಯಾರ್ಥಿಗಳು ಇಂದು ಕಾಲೇಜಿಗೆ ಹಿಜಾಬ್ ಧರಿಸಿಕೊಂಡೇ ಹೋಗುತ್ತೇವೆ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಶಾಲೆಯ ಆಡಳಿತ ಮಂಡಳಿಯವರು ಎಂದೂ ಬುರ್ಖಾ ಅಥವಾ ಹಿಜಾಬ್ ಧರಿಸಿ ಬರಬೇಡಿ ಎಂದು ಹೇಳಿಲ್ಲ. ಆದರೆ ತರಗತಿಯ ಒಳಗೆ ನೀವು ಹಿಜಾಬ್ ಧರಿಸಬೇಡಿ ಎಂದಿದೆ. ಏಕೆಂದರೆ ಬಹಳಷ್ಟು ವರ್ಷಗಳ ಹಿಂದೆಯೇ ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಎಂಬುದನ್ನು ಅಳವಡಿಸಲಾಗಿದೆ. ಸಮವಸ್ತ್ರ ಎಂಬ ಪದದಲ್ಲಿ ನಾವೆಲ್ಲರೂ ಸಮಾನರು ಎಂಬ ಅರ್ಥವಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಬೇಕು ಎಂದರು.
ಇಲ್ಲಿ ಕೇಸರಿ ಶಾಲು ಅಥವಾ ಹಿಜಾಬ್‍ನ ಪ್ರಶ್ನೆಯಲ್ಲ. ನಾವೆಲ್ಲರೂ ಸರಿಸಮಾನರು. ಯಾವುದೇ ಜಾತಿ ಧರ್ಮಕ್ಕೆ ಒಳಗೊಂಡವರಲ್ಲ. ಶಿಕ್ಷಣವನ್ನು ಪಡೆಯಲು ಬಂದವರು ಶೈಕ್ಷಣಿಕವಾಗಿ ಎಲ್ಲರೂ ಸಮಾನರು. ಬಡವ ಶ್ರೀಮಂತ ಎಂಬ ಬೇದ ಭಾವವೂ ಇರಬಾರದು ಎಂಬ ಕಾರಣಕ್ಕೆ ಸಮವಸ್ತ್ರ ಜಾರಿಗೆ ಬಂದಿರುವುದು ಎಂದು ತಿಳಿಸಿದರು.
ಶಿಕ್ಷಣ ಪಡೆಯಲು ಬಂದವರು ರಾಜಕೀಯ ಪ್ರೇರಿತರಾಗಿ ಧರ್ಮವನ್ನು ಎತ್ತಿ ಹಿಡಿಯುತ್ತಿದ್ದೇವೆ ಎಂದರೆ ಇದು ಮುಂದಿನ 10 ವರ್ಷಗಳಲ್ಲಿ ಮಾರಕವಾಗುವ ಸಾಧ್ಯತೆ ಇದೆ. ಇಂದಿನ ವಿದ್ಯಾರ್ಥಿಗಳು ಎಂದರೆ ದೇಶದ ಭವಿಷ್ಯ. ದೇಶದ ಭವಿಷ್ಯವನ್ನು ಧರ್ಮದ ಹೆಸರಿನಲ್ಲಿ ಹಾಳು ಮಾಡುತ್ತ ಇದ್ದೇವೆ. ಹಿಜಾಬ್ ಧರಿಸಿ ಧರ್ಮ ಆಚರಣೆ ಮಾಡಿ. ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ಆಚರಣೆ ಮಾಡುತ್ತೀರಿ ಎಂಬುದು ದೊಡ್ಡ ತಪ್ಪು ಎಂದರು.
ಕಲಿಯುವ ಆಸೆ ಹೊಂದಿದವರು ಕಲಿಯಿರಿ ಬದಲಿಗೆ ವಿಷಬೀಜವನ್ನು ಬಿತ್ತಬೇಡಿ. ಇಂದು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಧರ್ಮವನ್ನು ಗೊತ್ತುಪಡಿಸಲು ಎಂಬಂತಹ ಪರಿಸ್ಥಿತಿ ಎದುರಾಗಿದೆ. ದೇಶದ ಭವಿಷ್ಯವನ್ನು ನಿರ್ಮಾಣ ಮಾಡಬೇಕು ಎಂಬ ಗುರಿ ವಿದ್ಯಾರ್ಥಿಗಳಲ್ಲಿ ಇಲ್ಲವಾಗಿದೆ. ಇದೀಗ ಶಿಕ್ಷಣ ಎಂಬುದು ಅನಿವಾರ್ಯ. ಅಲ್ಲಿ ಅನುಮತಿ ಇಲ್ಲದಿದ್ದರೆ ಹಿಜಾಬ್ ತೆಗೆದು ಕುಳಿತುಕೊಳ್ಳಿ. ನಿಮಗೆ ಧರ್ಮವೇ ಮುಖ್ಯವಾಗಿದ್ದರೆ ನಮ್ಮಲ್ಲಿ ಬೇಕಾದಷ್ಟು ಮುಸ್ಲಿಂ ಕಾಲೇಜುಗಳಿವೆ. ಅಲ್ಲಿ ಹಿಜಾಬ್‍ಗೆ ಅನುಮತಿ ನೀಡುತ್ತಾರೆ. ನೀವು ಅಲ್ಲಿಗೂ ಹೋಗಬಹುದು ಎಂದು ತಿಳಿಸಿದರು.
ಬಳೆ ಹಾಗೂ ಬೊಟ್ಟು ಇಟ್ಟುಕೊಂಡು ಬರುತ್ತಾರೆ ಎಂದು ಆರೋಪಿಸುತ್ತೀರಿ. ಆದರೆ ಅದು ಧರ್ಮಕ್ಕೆ ಸಂಬಂಧಪಟ್ಟದ್ದಲ್ಲ. ಅದು ಅಲಂಕಾರಿಕ ವಸ್ತು. ಇಂದು ಹಿಜಾಬ್ ಹಾಗೂ ಕೇಸರಿ ಶಲ್ಯದ ಬಗ್ಗೆ ಪ್ರತಿಭಟನೆ ನಡೆಯುತ್ತಿದೆ. ನಾಳೆ 5 ಬಾರಿ ನಮಾಜ್ ಮಾಡಲು ಅವಕಾಶ ನೀಡುವಂತೆ ಪ್ರತಿಭಟನೆ ನಡೆಸುತ್ತೀರಿ. ಇದೇ ರೀತಿ ಬೇಡಿಕೆಗಳು ಹೆಚ್ಚುತ್ತಲೇ ಹೋಗುತ್ತವೆ ಬದಲು ಕಡಿಮೆಯಾಗುವುದಿಲ್ಲ. ದಯವಿಟ್ಟು ನೀವು ತರಗತಿಯಲ್ಲಿ ಸಮಾನತೆಗೆ ಗೌರವ ಕೊಡಿ ಎಂದು ವಿನಂತಿಸಿದರು.