ಹಿಂದೂ ಧರ್ಮ ತ್ಯಜಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರ್ಪಡೆಯಾದರೆ ಕಷ್ಟಗಳೆಲ್ಲ ದೂರ ಆಗುತ್ತದೆ ಎಂದು ನಂಬಿಸಿ ಮತಾಂತರಕ್ಕೆ ಯತ್ನ | ಆರೋಪಿ ಪಾದ್ರಿ ಇದೀಗ ಪೊಲೀಸ್ ಅತಿಥಿ
ಇತ್ತೀಚೆಗೆ ರಾಜ್ಯದಲ್ಲಿ ಮತಾಂತರಕ್ಕೆ ಯತ್ನಿಸಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಹಿಂದೂ ಧರ್ಮ ತ್ಯಜಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರ್ಪಡೆಯಾದರೆ ನಿಮ್ಮ ಕಷ್ಟಗಳೆಲ್ಲಾ ದೂರ ಆಗುತ್ತವೆ ಎಂದು ನಂಬಿಸಿ, ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.
ಬಂಧಿತನನ್ನು ಮಧು ಫಾಸ್ಟರ್ (34) ಎಂದು ಗುರುತಿಸಲಾಗಿದೆ.
ಬೊಮ್ಮನಕಟ್ಟೆ ನಿವಾಸಿ, ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಿವಕುಮಾರ್ ಎಂಬುವರ, 3 ವರ್ಷದ ಮಗ ಅಖಿಲ್ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ತನ್ನ ಮಗನ ಆರೋಗ್ಯ ಸಮಸ್ಯೆಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಮಗನ ಆರೋಗ್ಯ ಸುಧಾರಿಸಿರಲಿಲ್ಲ. ನಂತರ ಶಿವಕುಮಾರ್‌ಗೆ ಕ್ರಿಶ್ಚಿಯನ್ ಧರ್ಮದ ಮಧು ಪಾದ್ರಿ ಪರಿಚಯವಾಗಿದೆ. ಪರಿಚಯದ ನಂತರ ಶಿವಕುಮಾರ್ ಮಗನ ಆರೋಗ್ಯ ಸಮಸ್ಯೆಯನ್ನು ದುರುಪಯೋಗ ಪಡಿಸಿಕೊಂಡ ಮಧು, ನಿನ್ನ ಮಗನ ಆರೋಗ್ಯ ಸಮಸ್ಯೆ ಸುಧಾರಿಸಬೇಕು ಅಂದರೆ ಹಿಂದೂ ಧರ್ಮ ತ್ಯಜಿಸಿ, ಕ್ರಿಶ್ಚಿಯನ್ ಧರ್ಮಕ್ಕೆ ಸೇರ್ಪಡೆಯಾಗು. ಜೊತೆಗೆ ನಿಮ್ಮ ಮನೆಯಲ್ಲಿರುವ ಹಿಂದೂ ದೇವರ ಫೋಟೋಗಳನ್ನು ತೆಗೆದು ಹಾಕುವಂತೆ ತಿಳಿಸಿದ್ದಾನೆ.
ಅಷ್ಟೇ ಅಲ್ಲದೇ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಕೆಲವು ಪುಸ್ತಕಗಳನ್ನು ನೀಡಿ, ಇವುಗಳನ್ನು ಮನೆಯಲ್ಲಿ ಇಟ್ಟುಕೊಂಡು ಪ್ರಾರ್ಥನೆ ಮಾಡುವಂತೆ ತಿಳಿಸಿದ್ದಾನೆ. ಅಲ್ಲದೇ ಮಧು ಪಾದ್ರಿ ಬೊಮ್ಮನಕಟ್ಟೆ ಸಮೀಪ ಖಾಲಿ ನಿವೇಶನ ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಿ ಅಲ್ಲಿ ಹಲವು ಮಂದಿಯನ್ನು ಸೇರಿಸಿ ಪ್ರಾರ್ಥನೆ ಮಾಡಿಸುತ್ತಿದ್ದ. ಇದೆಲ್ಲಾದರಿಂದ ಬೇಸತ್ತ ಶಿವಕುಮಾರ್, ಮಧು ಪಾದ್ರಿ ಎಂಬಾತ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾನೆ ಎಂದು ಆರೋಪಿಸಿ, ಮಧು ಪಾದ್ರಿ ವಿರುದ್ಧ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಮಧು ಪಾದ್ರಿಯನ್ನು ಬಂಧಿಸಿದ್ದಾರೆ. ಅಲ್ಲದೇ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ.