ಕೊರೋನಾ ಭೀತಿ ಹಿನ್ನೆಲೆ ಗಡಿಪ್ರದೇಶದಲ್ಲಿ ತೀವ್ರ ತಪಾಸಣೆ ; ಕಲ್ಲುಗುಂಡಿ ಮತ್ತು ಜಾಲ್ಸೂರು ವಾಹನಗಳ ತಪಾಸಣೆ
ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸುಳ್ಯದ ಗಡಿ ಪ್ರದೇಶವಾದ ಕಲ್ಲುಗುಂಡಿ ಮತ್ತು ಜಾಲ್ಸೂರಿನಲ್ಲಿ ವಾಹನಗಳ ತಪಾಸಣೆ ಮತ್ತು ಜಾಗೃತಿ ಕಾರ್ಯ ತೀವ್ರಗೊಂಡಿದೆ.
ಮಡಿಕೇರಿಯ ಕೊಂಡಂಗೇರಿ ಪ್ರದೇಶದ ವ್ಯಕ್ತಿಯೊಬ್ಬನಿಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಡಿಕೇರಿ ಸುಳ್ಯ ಪ್ರದೇಶಕ್ಕೆ ಹತ್ತಿರವಿರುವ ಕಾರಣ ಸುಳ್ಯವನ್ನು ಸಂಪರ್ಕಿಸುವ ಸಂಪಾಜೆ ಮತ್ತು ಕಲ್ಲುಗುಂಡಿ ಭಾಗದಲ್ಲಿ ಮಡಿಕೇರಿ ಕಡೆಯಿಂದ ಬರುವ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಪೋಲೀಸ್ ಇಲಾಖೆಗಳ ಸಿಬ್ಬಂಧಿಗಳು ಕೈಜೋಡಿಸಿದ್ದಾರೆ. ವಾಹನಗಳನ್ನು ತಡೆದು ನಿಲ್ಲಿಸಿ ಮಾಹಿತಿಗಳನ್ನು ಕಲೆ ಹಾಕುವ ಕೆಲಸ ಆರೋಗ್ಯ ಇಲಾಖೆ ಮಾಡುತ್ತಿದೆ.
ಅಲ್ಲದೇ ನೆರೆರಾಜ್ಯ ಕೇರಳವನ್ನು ಸಂಪರ್ಕಿಸುವ ಜಾಲ್ಸೂರು ಗಡಿಯಲ್ಲೂ ವಾಹನಗಳ ತಪಾಸನೆ ನಿರಂತರವಾಗಿ ನಡೆಯುತ್ತಿದೆ. ಮಡಿಕೇರಿಯಿಂದ ಸುಳ್ಯಕ್ಕೆ ಬರುವ ಬಸ್‌ಗಳನ್ನು ಮತ್ತು ಪ್ರಯಾಣಿಕರನ್ನು ಬಸ್ಸ್ ನಿಲ್ದಾಣದಲ್ಲೇ ತಪಾಸಣೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶಕ್ಕೆ ಅನುಸಾರವಾಗಿ ಪುತ್ತೂರು ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರ್ ಅನಂತಶಂಕರ್, ತಾಲೂಕು ವೈದ್ಯಾದಿಕಾರಿ ಡಾ. ಸುಬ್ರಹ್ಮಣ್ಯ ಅವರುಗಳ ತಂಡ ತಪಾಸನೆ ಹಾಗೂ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕೊರೋನಾ ತಪಾಸಣೆ ಮತ್ತು ಜಾಗೃತಿ ಕಾರ್ಯದ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ಪ್ರತಿಕ್ರಿಯೆ ನೀಡಿ ಕೊರೋನಾ ಜಾಗೃತಿ ಕಾರ್ಯಕ್ರಮಗಳನ್ನು ಸುಳ್ಯ ತಾಲೂಕಿನಾದ್ಯಂತ ಮಾಡುತ್ತಿದ್ದೇವೆ. ನಗರ ಪ್ರದೇಶದಲ್ಲಿ ಎಎನ್‌ಎಂಗಳ ನೇತೃತ್ವದಲ್ಲಿ ಮನೆ ಮನೆ ಭೇಟಿ ಮಾಡಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಅಂಗನಾವಾಡಿ ಮತ್ತು ಆಶಾ ಕಾರ್ಯಕರ್ತೇಯರ ಮೂಲಕ ಮನೆ ಮನೆ ಭೇಟಿ ಆರಂಭಿಸಲಾಗುವುದು.
ಎಸಿ ಮತ್ತು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಹಲವು ಜಾಗೃತಿ ಸಭೆಗಳು ನಡೆದಿದೆ. ಗಡಿಭಾಗಗಳಿಂದ ಸಮಸ್ಯೆಗಳು ಬರದಂತೆ ಕಲ್ಲುಗುಂಡಿ ಮತ್ತು ಜಾಲ್ಸೂರಿನಲ್ಲಿ ವಾಹನಗಳ ತಪಾಸನೆ ನಡೆಯುತ್ತಿದೆ. ಕೇರಳಕ್ಕೆ ಮತ್ತು ಕೊಡಗಿಗೆ ಹೋಗುವ ಮತ್ತು ಬರುವ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ. ಸುಳ್ಯದಲ್ಲಿ ಶಂಕಿತ ಪ್ರಕರಣ ದಾಖಲಾಗಿಲ್ಲ. ಆದರೆ ನಮ್ಮ ತಂಡ ಮನೆ ಮನೆಗೆ ಭೇಟಿ ನೀಡಿ ವಿದೇಶಗಳಿಂದ ಬಂದ ವ್ಯಕ್ತಿಗಳ ನಿಗಾ ಇಟ್ಟು ಹೊರಗಡೆ ಹೋಗದಂತೆ ತಿಳಿಸಲಾಗಿದೆ ಎಂದರು.