ಪೆರಾಬೆ ಗ್ರಾಮ ಸಭೆಯಲ್ಲಿ ಜಮೀನು ವಿಚಾರಕ್ಕೆ ಚರ್ಚೆ : ದಲಿತ ಮಹಿಳೆಯಿಂದ ಜಾತಿನಿಂದನೆ ಸುಳ್ಳು ದೂರು -ತುಳಸಿ
ಕಡಬ ತಾಲೂಕಿನ ಪೆರಾಬೆ ಗ್ರಾಮ ಸಭೆಯಲ್ಲಿ ಇಡಾಳದ ಜಮೀನು ವಿಚಾರಕ್ಕೆ ಸಂಬಂಧಿಸಿ ದಲಿತ ಮಹಿಳೆಗೆ ಗ್ರಾಮಸ್ಥರಿಬ್ಬರು ಜಾತಿ ನಿಂದನೆ ನಡೆಸಿದ್ದಾರೆ ಎನ್ನುವುದು ಸಂಪೂರ್ಣ ಸುಳ್ಳಾಗಿದ್ದು ದುರುದ್ದೇಶದಿಂದ
ಅಮಾಯಕರ ವ್ಯಕ್ತಿಗಳ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಇಡಾಳ ನಿವಾಸಿ ತುಳಸಿ ಶಿರೋಡಿಯನ್ ಅವರು ಆರೋಪಿಸಿದ್ದಾರೆ.
ಅವರು ಬುಧವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಾವು ಪೆರಾಬೆ ಗ್ರಾಮದ ಇಡಾಳದಲ್ಲಿ ನನ್ನ ಅಜ್ಜನ ಕಾಲದಿಂದಲೂ ಕೃಷಿ ಚಟುವಟಿಕೆ ಮಾಡುತ್ತಿದ್ದು, ನಮ್ಮ ಸ್ವಾಧೀನದಲ್ಲಿದ್ದ ಭೂಮಿಯನ್ನು ಸಮೀಪದ ಜಯಕುಮಾರಿ ಎಂಬವರು ತನಗೆ ಸೇರಿದ್ದೆಂದು ತಕರಾರು ಎಬ್ಬಿಸಿದ ಕಾರಣದಿಂದಾಗಿ ಕಡಬ ತಹಶೀಲ್ದಾರರು ಸರ್ವೆ ನಡೆಸಿ ಜಯಕುಮಾರಿ ಅವರಿಗೆ ಸೇರಿದ್ದಲ್ಲ. ಶಿವರಾಮ ಪೂಜಾರಿಯವರಿಗೆ ಸೇರಿದ್ದು ಎಂದು ವರದಿ ನೀಡಿದ್ದರು.
ಆದರೆ ಜಯಕುಮಾರಿ ಅವರು ಸರಕಾರಿ ಜಮೀನನ್ನು ನಾವು ಒತ್ತುವರಿ ಮಾಡಿರುವುದೆಂದು ದಲಿತ ಸಂಘಟನೆಗಳಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸಿದ್ದರು. ಅವರ ಒತ್ತಡಕ್ಕೆ ಮಣಿದ ಪುತ್ತೂರು ಸಹಾಯಕ ಆಯುಕ್ತರು ಸ್ಥಳ ತನಿಖೆ ಮಾಡದೆ ಭೂಮಿಯನ್ನು ನಿವೇಶನರಹಿತರಿಗೆ ಮೀಸಲಿರಿಸಿ ಪಹಣಿಯಲ್ಲಿ ಕೂಡ ದಾಖಲು ಮಾಡಿ ಆದೇಶಿಸಿದ್ದರು. ನಾವು ఆ ಆದೇಶವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ತಂದಿದ್ದೆವು. ಆದರೆ ತಡೆಯಾಜ್ಞೆ ಇದ್ದರೂ ಪೆರಾಬೆ ಗ್ರಾ.ಪಂ. ಆಡಳಿತ ಮಂಡಳಿಯವರು ದಲಿತ ಸಂಘಟನೆಯ ಸದಸ್ಯರನ್ನು ಸೇರಿಸಿಕೊಂಡು ಸುಮಾರು ೩-೪ ವರ್ಷದ ೧೪೦ ತೆಂಗಿನ ಮರ, ೧೦0 ಬಾಳೆ ಗಿಡ, ರಬ್ಬರ್ ಸೇರಿದಂತೆ ಇನ್ನಿತರ ಕೃಷಿಯನ್ನು ನಾಶ ಮಾಡಿದ್ದಾರೆ. ಆ ದೌರ್ಜನ್ಯವನ್ನು ಖಂಡಿಸಿ ರೈತ ಸಂಘಟನೆಯ ನೇತೃತ್ವದಲ್ಲಿ ನಾವು ಗ್ರಾ.ಪಂ. ಎದುರುಗಡೆ ಪ್ರತಿಭಟನೆ ನಡೆಸಿದ್ದೆವು. ಅದೇ ವಿಚಾರ ಜ. ೨೫ ರಂದು ಜರಗಿದ ಪೆರಾಬೆ ಗ್ರಾಮ ಸಭೆಯಲ್ಲಿ ಚರ್ಚೆಗೆ ಬಂದಾಗ ಗ್ರಾಮಸ್ಥ ನಾಗಪ್ಪ ಗೌಡ ಅವರು ಮಾತನಾಡಿ ನ್ಯಾಯಾಲಯದ ತಡೆಯಾ ಇದ್ದರೂ ಗ್ರಾ.ಪಂ. ಆಡಳಿತದವರು ಕೃಷಿ ಭೂಮಿಗೆ ಅಕ್ರಮ ಪ್ರವೇಶ ಮಾಡಿ ಕೃಷಿ ನಾಶ ಮಾಡಿರುವುದು ಸರಿಯಲ್ಲ ಎಂದು ಪ್ರಶ್ನಿಸಿದ್ದರು.
ಆ ವಿಚಾರದಲ್ಲಿ ಚರ್ಚೆ ನಡೆಯುತ್ತಿದ್ದಾಗ ಇಡಾಳ ಜಾಗದ ಬಗ್ಗೆ ಮಾತನಾಡಲು ನಿನಗೇನು ಅಽಕಾರ ಎಂದು ಪೆರಾಬೆ ಗ್ರಾ.ಪಂ. ಗ್ರಂಥಪಾಲಕಿ ಮಧ್ಯಪ್ರವೇಶಿಸಿ ಏಕವಚನದಲ್ಲಿ ನಾಗಪ್ಪ ಗೌಡರನ್ನು ಪ್ರಶ್ನೆ ಮಾಡಿದ್ದರು. ಅಲ್ಲಿ ಚರ್ಚೆ ನಡೆದಿದೆಯೇ ಹೊರತು ಜಾತಿ ನಿಂದನೆಯಾಗುವಂತಹ ಯಾವುದೇ ಶಬ್ದ ಪ್ರಯೋಗ ಆಗಿಲ್ಲ. ಆದರೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಬ್ಬರು ಜಾತಿ ನಿಂದನೆ ಮಾಡಿದ್ದಾರೆ ಎಂದೂ, ಆ ಸಂದರ್ಭದಲ್ಲಿ ಏನೂ ಮಾತನಾಡದ ಗ್ರಾಮಸ್ಥ ಉಮೇಶ್ ಅವರ ಹೆಸರನ್ನು ಕೂಡ ಸೇರಿಸಿ ಜಾತಿನಿಂದನೆ ಆರೋಪ ಹೊರಿಸಿ ಸುಳ್ಳು ಕೇಸು ನೀಡಿರುವುದು ಅನ್ಯಾಯ ಎಂದು ತುಳಸಿ ಶಿರೋಡಿಯನ್ ಹೇಳಿದರಲ್ಲದೆ ಸುಳ್ಳು ಆರೋಪದ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದರು. ಗ್ರಾಮಸಭೆಯಲ್ಲಿ ಗ್ರಾ.ಪಂ. ಸಿಬ್ಬಂದಿಯೇ ಚರ್ಚೆ ನಡೆಸಲು ಅವಕಾಶ ಇದೆಯೇ? ಗ್ರಾಮಸ್ಥನಿಗಾಗಿರುವ ಅನ್ಯಾಯವನ್ನು ಗ್ರಾಮಸಭೆಯಲ್ಲಿ ಪ್ರಶ್ನಿಸಿರುವುದಕ್ಕೆ ಸುಳ್ಳು ಕೇಸು ದಾಖಲಿಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿರುವ ಅವರು ನ್ಯಾಯಾಲಯದ ತಡೆ ಇದ್ದರೂ ಕೃಷಿಯನ್ನು ನಾಶಪಡಿಸಿ ಸೈಟ್ ಮಾಡಿಕೊಡಲು ಹೊರಟಿರುವ ಗ್ರಾ.ಪಂ. ಆಡಳಿತ ಮಂಡಳಿಯ ನಡೆಯ ಬಗ್ಗೆ ಅನುಮಾನ ಮೂಡುತ್ತಿದ್ದು, ಆ ಅವ್ಯವಹಾರದಲ್ಲಿ ಯಾರೆದ್ದೆಲ್ಲ ಕೈವಾಡ ಇದೆ ಎಂದು ಸಂಬಂಧಪಟ್ಟವರು ತನಿಖೆ ನಡೆಸಿ ಬಯಲು ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಅಶೋಕ್ ಇಡಾಳ ಹಾಗೂ ಶೇಖರ ಕೆದ್ದೊಟ್ಟೆ ಉಪಸ್ಥಿತರಿದ್ದರು.