ಶಾಲೆಗೆ ಹೋಗುತ್ತಿದ್ದ ಮಕ್ಕಳ ಮೇಲೆ ಜೇನುನೊಣಗಳ ದಾಳಿ | 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Share the Article

ಶಾಲೆಗೆ ಹೋಗುತ್ತಿದ್ದ ಮಕ್ಕಳ ಮೇಲೆ ಜೇನು ನೊಣಗಳ ಗುಂಪು ದಾಳಿ ಮಾಡಿದ ಪರಿಣಾಮ 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಕನ್ನಡದ ಕಾರವಾರದಲ್ಲಿ ನಡೆದಿದೆ.

ಕಾರವಾರ ತಾಲೂಕಿನ ಕಿನ್ನರ ಗ್ರಾಮದ ನ್ಯೂ ಹೈಸ್ಕೂಲ್ ನಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಬೆಳಗ್ಗೆ ಶಾಲೆಗೆ ಮಕ್ಕಳು ಹೋಗುತ್ತಿರುವಾಗ ಏಕಾಏಕಿ ಶಾಲೆಯ ಪಕ್ಕದಲ್ಲೇ ಇರುವ ತೆಂಗಿನಮರದಲ್ಲಿ ಗೂಡುಕಟ್ಟಿದ್ದ ಜೇನುನೊಣ ದಾಳಿ ಮಾಡಿದೆ. ಈ ಪರಿಣಾಮ 20ಕ್ಕೂ ಹೆಚ್ಚು ಮಕ್ಕಳಿಗೆ ಜೇನು ಕಡಿದಿದೆ. ತಕ್ಷಣಕ್ಕೆ 16 ಜನರು ಮಕ್ಕಳನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಲ್ಲದೇ ಗ್ರಾಮದ ಓರ್ವ ಪುರುಷ ಹಾಗೂ ಮಹಿಳೆಗೂ ಜೇನು ಕಚ್ಚಿದ್ದು, ಗಂಭೀರ ಗಾಯಗೊಂಡ ಇವರನ್ನೂ ಸಹ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನುಘಟನೆ ನಡೆದ ವಿಷಯ ತಿಳಿದ ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಸ್ಥಿತಿಗತಿ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಕ್ಕಳ ಮೇಲೆ ಜೇನು ಕಚ್ಚಿ ಹೆಚ್ಚಿನ ಹಾನಿ ಮಾಡಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಲಾಗಿದೆ. ಅರಣ್ಯ ಇಲಾಖೆಗೂ ಸಹ ಸೂಚನೆ ನೀಡಲಾಗಿದ್ದು, ಶಾಲಾ ಆವರಣದಲ್ಲಿ ಇರುವ ಜೇನನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಇನ್ನು ಕಾರವಾರ ಮತ್ತು ಅಂಕೋಲ ಭಾಗದಲ್ಲಿ ದಿನದಿಂದ ದಿನಕ್ಕೆ ಜೇನು ಹಾವಳಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಹಿಂದೆ ಡಿ.23 ರಂದು ಅಂಕೋಲದ ಅಜ್ಜಿಕಟ್ಟದ ನಿಲಂಪುರದಲ್ಲಿ ಹಸನ್ ಖಾನ್ ಕರೀಂ ಖಾನ್ ಎಂಬವವರು ಜೇನು ಕಡಿದು ಮೃತರಾಗಿದ್ದರು. ಅಂತೆಯೇ ಕಾರವಾರ ಅಂಕೋಲ ಭಾಗದಲ್ಲಿ ಕಳೆದ ಒಂದು ವಾರದಲ್ಲಿ 60ಕ್ಕೂ ಹೆಚ್ಚು ಜನರಿಗೆ ಜೇನು ಕಡಿದಿದೆ ಎನ್ನಲಾಗಿದೆ.

Leave A Reply