ಸಿಎಂ ಬೊಮ್ಮಾಯಿ ಬದಲಾವಣೆ ವದಂತಿಗೆ ಪರದೆ ಎಳೆದ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ | ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಎಲೆಕ್ಷನ್ ಅಂತೆ
ಬೆಂಗಳೂರು : ರಾಜ್ಯದಲ್ಲಿ ಬಿರುಸಿನಲ್ಲಿ ಚರ್ಚೆಯಾಗ್ತಿರೋ ಸಿಎಂ ಬದಲಾವಣೆ ವಿಚಾರ ಈಗ ಒಂದು ಹಂತಕ್ಕೆ ಬಂದು ನಿಂತಂತೆ ಆಗಿದೆ. ಅಲ್ಲಿ ಹುಬ್ಬಳ್ಳಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬದಲಾವಣೆಗೆ ಅಂತಿಮ ಸ್ಪರ್ಶನೀಡಿ ಪರ್ಯಾಯ ನಾಯಕರ ಆಯ್ಕೆಯೂ ನಡೆಯಲಿದೆ ಎಂಬಷ್ಟರಮಟ್ಟಿಗೆ ಮಹತ್ವ ಪಡೆದುಕೊಂಡಿದ್ದ ಸಿಎಂ ಬದಲಾವಣೆ ಬಾಂಬ್ ಠುಸ್ ಎಂದಿದೆ. ಕಾರ್ಯಕಾರಿಣಿ ನಡೆಯುವ ಮುನ್ನವೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ದೊಡ್ಡ ಪರದೆ ಎಳೆದಿದ್ದಾರೆ.
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿದೆ. ಪಕ್ಷದ ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕತ್ವ ಬದಲಾಣೆಯ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಸಿಎಂ ಯಾರಾಗಬೇಕೆಂಬುದು ತೀರ್ಮಾನವಾಗಲಿದೆ ಎಂಬ ಮಾತುಗಳು ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮ್ಯಾಟರ್ ಆಗಿತ್ತು. ಜೊತೆಗೆ, ಸಿಎಂ ಬಸವರಾಜ್ ಬೊಮ್ಮಾಯಿ ಅನಾರೋಗ್ಯದ ವಿಚಾರ ಈ ಊಹಾಪೋಹಗಳಿಗೆ ಮತ್ತಷ್ಟು ಬಲ ತುಂಬಿತ್ತು. ಆದರೆ ಕಾರ್ಯಕಾರಿಣಿ ಅರಂಭಕ್ಕೂ ಮುನ್ನವೇ ಈ ಊಹಾಪೋಹ ಗಳಿಗೆ ತೆರೆ ಬಿದ್ದಿದ್ದು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಬೊಮ್ಮಾಯಿಯವರನ್ನು ಮುಕ್ತ ಕಂಠದಿಂದ ಶ್ಲಾಘಿಸುವ ಮೂಲಕ ಸಿಎಂ ಬದಲಾವಣೆಯ ಪ್ರಹಸನಕ್ಕೆ ಅಂತ್ಯ ಹಾಡಿದ್ದಾರೆ. ಬೊಮ್ಮಾಯಿ ಅವರು ನಿಟ್ಟುಸಿರುಬಿಟ್ಟಿದ್ದಾರೆ. ಬೊಮ್ಮಯ್ಯ ಅವರನ್ನು ಆಡಿಕೊಂಡು ಹೋಗುತ್ತಿದ್ದ ಬಿಜೆಪಿಯೊಳಗಿನ ವಿರೋಧಿಗಳಿಗೆ ಮತ್ತೆ ನಿರಾಸೆಯಾಗಿದೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ನಾಯಕ ಅರುಣಸಿಂಗ್ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಬದಲಾವಣೆ ಕೇವಲ ಊಹಾಪೋಹ. ಮುಂದಿನ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದಿದ್ದಾರೆ. ಸಿಎಂ ಬೊಮ್ಮಾಯಿ ಕಾರ್ಯವೈಖರಿಗೆ ಫುಲ್ ಮಾರ್ಕ್ಸ್‌ನೀಡಿ ಬಹುಪರಾಕ್ ಎಂದ ಅರುಣ ಸಿಂಗ್, ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಿಎಂ ಆಗಿ ಮುಂದುವರೆಯುತ್ತಾರೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರು ಬದಲಾಗಲ್ಲ ಎಂದು ಈ ಹಿಂದೆ ಹೇಳಿದ್ದರು ಅರುಣ್ ಸಿಂಘ್. ಈ ಬಗ್ಗೆ ಮಾತನಾಡಿದ ಅರುಣ ಸಿಂಗ್, ನಾವಾಗಿ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿಲ್ಲ. ಯಡಿಯೂರಪ್ಪನವರೇ ಯುವಕರಿಗೆ ಸ್ಥಾನ ಹಾಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ಬಿಟ್ಟು ಕೊಟ್ಟಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಅರುಣ್ ಸಿಂಗ್ ಕಾಂಗ್ರೆಸ್ ನಲ್ಲಿ ಈಗಾಗಲೇ ಅಧಿಕಾರಕ್ಕಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ನಡುವೆ ಜೋರು ಫೈಟ್ ನಡೆಯುತ್ತಿದೆ. ಇಡೀ ಕಾಂಗ್ರೆಸ್ ದೇಶದಲ್ಲೇ ನೆಲೆಕಳೆದುಕೊಂಡಿದೆ ಎಂದಿದ್ದಾರೆ. ರಾಜ್ಯ ಬಿಜೆಪಿ ಕರ್ನಾಟಕದಲ್ಲಿ ಸಮರ್ಥವಾಗಿ ಆಡಳಿತ ನಡೆಸಿದ್ದು, ಕಾರ್ಯಕಾರಿಣಿಗೆ ಜೆ.ಲಿ.ನಡ್ಡಾ ಕೊರೋನಾ ನಿಯಮಗಳ ಕಾರಣಕ್ಕೆ ಹಾಜರಾಗುತ್ತಿಲ್ಲ ಎಂದು ಅರುಣ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಒಟ್ಟಾರೆಯಾಗಿ ಬೊಮ್ಮಾಯಿ ಅವರು ಫುಲ್ ಮೂಡಿನಲ್ಲಿ ಇದ್ದಾರೆ. ಇನ್ನೊಂದು ವರ್ಷ ಅವರ ಸ್ಥಾನ ಖಚಿತ ಎನ್ನಲಾಗುತ್ತಿದೆ.