ಮಂಗಳವಾರ ಕೂದಲು, ಉಗುರು ಕತ್ತರಿಸುವುದು ಅಶುಭವೇಕೆ?? | ಹಿಂದೂ ಪಂಚಾಂಗದ ಪ್ರಕಾರ ಇದಕ್ಕೆ ಕಾರಣವೇನೆಂದು ತಿಳಿದುಕೊಳ್ಳಿ
ಹಿಂದೂ ಧರ್ಮದ ಹಲವಾರು ಆಚರಣೆಗಳು, ಸಂಪ್ರದಾಯಗಳನ್ನು ಮೂಢನಂಬಿಕೆಯೆಂದು ಜರಿಯುವವರು ಹಲವರಿದ್ದಾರೆ. ಆದರೆ, ವಿಜ್ಞಾನ ಮುಂದುವರಿದಂತೆಲ್ಲ ಈ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆ ದೊರೆಯುತ್ತ ಹೋಗುತ್ತಿದೆ. ಹಾಗೆಯೇ ಹಿಂದು ಪಂಚಾಂಗದಲ್ಲಿಯೂ ಅವುಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ.
ಮಂಗಳವಾರ ಹಿಂದೂಗಳು ಕೂದಲು ಕತ್ತರಿಸುವುದಿಲ್ಲ ಹಾಗೆಯೇ ಉಗುರು ಕೂಡ ಕತ್ತರಿಸುವುದಿಲ್ಲ. ಹಲವು ಮನೆಗಳಲ್ಲಿ ಬಲೆ ತೆಗೆದು ಗುಡಿಸುವುದಿಲ್ಲ. ಮಂಗಳವಾರ ಯಾವ ಸಲೂನ್‌ಗಳೂ ತೆರೆದಿರುವುದಿಲ್ಲ. ಇದನ್ನೇ ನೋಡಿಕೊಂಡು ಬೆಳದ ಹಿಂದೂಗಳಿಗೆ ಈ ಅಭ್ಯಾಸ ಅನುಸರಣೆ ಹುಟ್ಟಿನಿಂದಲೇ ಬಂದಿರುತ್ತದೆ. ಆದರೆ, ಮಂಗಳವಾರ ಏಕೆ ಕೂದಲು ಹಾಗೂ ಉಗುರು ಕತ್ತರಿಸುವುದಿಲ್ಲ ಎಂದು ಮಾತ್ರ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ.
ಹಿಂದೂ ಪಂಚಾಂಗದಲ್ಲಿ ವಾರದ ಏಳು ದಿನಗಳಿಗೂ ಅದರದ್ದೇ ಆದ ವಿಶೇಷ ಮಹತ್ವವಿದೆ. ಒಂದೊಂದು ದಿನ ಒಂದೊಂದು ಗ್ರಹ, ಹಾಗೂ ದೇವರಿಗೆ ಸಂಬಂಧಿಸಿದ್ದು. ಆಯಾ ದಿನ ಆ ದೇವರಿಗೆ ಹಾಗೂ ಗ್ರಹಕ್ಕೆ ಮೆಚ್ಚಿಸುವ ಕೆಲಸವನ್ನೇ ಮಾಡುವುದರಿಂದ ಬದುಕಿನಲ್ಲಿ ಶುಭವಾಗುತ್ತದೆ. ಅನುಚಿತ ಕ್ರಮಗಳನ್ನು ತೆಗೆದುಕೊಂಡರೆ ಅದರಿಂದ ಕೆಟ್ಟ ಫಲ ಅನುಭವಿಸಬೇಕಾಗುತ್ತದೆ.
ಮಂಗಳವಾರ ದುರ್ಗಾ ಮಾತೆ ಹಾಗೂ ಮಹಾಲಕ್ಷ್ಮಿಯ ದಿನ. ಅವರನ್ನು ಮಂಗಳವಾರದಂದು ಪೂಜಿಸುವುದರಿಂದ ಅದೃಷ್ಟ ಹಾಗೂ ಅನುಗ್ರಹ ನಮ್ಮದಾಗಲಿದೆ. ಮಂಗಳವಾರ ಎಂದರೆ ಹೆಸರೇ ಹೇಳುವಂತೆ ಬಹಳ ಮಂಗಳಕರ ದಿನ. ಸಾಮಾನ್ಯವಾಗಿ ಹಿಂದೂಗಳು ಹಬ್ಬಹರಿದಿನ ಸೇರಿದಂತೆ ಮಂಗಳವಾದ ದಿನಗಳಲ್ಲಿ ಅಶುಭ ಎನ್ನುವಂಥ ಕೂದಲು ಕತ್ತರಿಸುವುದು ಹಾಗೂ ಉಗುರು ಕತ್ತರಿಸುವುದನ್ನು ಮಾಡುವುದಿಲ್ಲ. ಅಲ್ಲದೆ ಸೌಂದರ್ಯ ಸೂಚಕವಾಗಿರುವ ಕೂದಲನ್ನು ಕತ್ತರಿಸುವುದರಿಂದ ಮಂಗಳ ರೂಪಿಣಿಯಾದ ಮಹಾಲಕ್ಷ್ಮಿಗೆ ಅವಮಾನಿಸಿದಂತಾಗುತ್ತದೆ. ಹಾಗೊಂದು ವೇಳೆ ಮಾಡಿದರೆ ಅದು ಅಪಶಕುನಕ್ಕೆ ಕಾರಣವಾಗುತ್ತದೆ.
ಮತ್ತೊಂದು ಕಾರಣವೆಂದರೆ, ಮಂಗಳವಾರವು ಮಂಗಳ ಅಂದರೆ ಕುಜನಿಂದ ಆಳಲ್ಪಡುತ್ತದೆ. ಮಂಗಳ ಕೆಂಪುಗ್ರಹ. ಬಹಳ ಬಿಸಿ ಇರುವವನು. ಮನುಷ್ಯನ ದೇಹ ಹಾಗೂ ರಕ್ತವನ್ನು ಪ್ರಭಾವಿಸುವ ಮಂಗಳ, ದೇಹದಲ್ಲಾಗುವ ಗಾಯಗಳಿಗೆ ಕಾರಣ. ಅದೂ ಅಲ್ಲದೆ, ಆತ ಸುಖಾಸುಮ್ಮನೆ ಜಗಳ ತಂದಿಡುವುದು, ಸ್ಪರ್ಧೆ ಏರ್ಪಡಿಸುವುದು ಮಾಡುತ್ತಾನೆ. ಹೀಗಾಗಿ, ಕೂದಲಿಗೆ ಕತ್ತರಿ ಹಾಕುವ ಸಾಹಸವನ್ನು ಯಾರೂ ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ. ಮತ್ತೊಂದು ನಂಬಿಕೆ ಎಂದರೆ, ಮನುಷ್ಯರ ದೇಹದ ಶಕ್ತಿಯ ಒಂದು ಭಾಗವು ಕೂದಲಿನಲ್ಲಿರುತ್ತದೆ. ಮಂಗಳವಾರ ಕೇಶವನ್ನು ಕತ್ತರಿಸುವುದರಿಂದ ದೇಹದ ಶಕ್ತಿ ನಷ್ಟವಾಗಿ ಕುಜನ ಪ್ರಭಾವ ಬಹಳ ಹೆಚ್ಚುತ್ತದೆ. ಅಂಗಾರಕನ ಕೆಂಗಣ್ಣು ಬಿದ್ದರೆ ಬದುಕು ಹಳಿ ತಪ್ಪುವುದು ನಿಶ್ಚಿತ.
ಮಂಗಳವಾರ ಕೇವಲ ಉಗುರು ಹಾಗೂ ಕೂದಲು ಕತ್ತರಿಸುವುದಷ್ಟೇ ಅಲ್ಲ, ಅಂದು ಯಾರೂ ಮತ್ತೊಬ್ಬರಿಗೆ ಸಾಲ ನೀಡುವುದಿಲ್ಲ, ಹಣ ಕಟ್ಟುವುದಿಲ್ಲ. ಲಕ್ಷ್ಮೀಯನ್ನು ಮನೆಯಿಂದ ಹೊರಗೆ ಕಳುಹಿಸುವುದಿಲ್ಲ. ಲಕ್ಷ್ಮೀ ಸಂಪತ್ತನ್ನು ನೀಡುವವಳು. ಹಾಗಾಗಿ, ಲಕ್ಷ್ಮಿಯ ದಿನವಾದ ಮಂಗಳವಾರ ಅವಳನ್ನು ಆಹ್ವಾನಿಸಬೇಕೇ ಹೊರತು ಹೊರಗೆ ಕಳುಹಿಸಬಾರದು ಎಂಬುದು ನಂಬಿಕೆ. ಹಾಗೊಂದು ವೇಳೆ ಕಳುಹಿಸಿದರೆ ಅದರಿಂದ ಕೆಡುಕಾಗಲಿದೆ ಎಂಬ ನಂಬಿಕೆಯಿದೆ. ಲಕ್ಷ್ಮೀ ಒಳಬರುವಾಗ ಕೂದಲು, ಉಗುರಿನಂಥ ಅಶುಭಗಳು ಮನೆಯ ಯಾವ ಭಾಗದಲ್ಲೂ ಬಿದ್ದಿರಬಾರದು ಎಂಬುದು ಮತ್ತೊಂದು ಕಾರಣ.
ಈ ಬಗ್ಗೆ ಜ್ಯೋತಿಷಿಗಳು ಹೇಳುವುದೇನು?
ಮಂಗಳವಾರ ಕೂದಲು ಕತ್ತರಿಸಿದರೆ ಆಯಸ್ಸಿನಲ್ಲಿ 8 ತಿಂಗಳು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಅಂದ ಹಾಗೆ, ಬುಧವಾರ ಬುಧ ಗ್ರಹದ ದಿನವಾಗಿದ್ದು ಇದು ಕ್ಷೌರಕ್ಕೆ ಶುಭ ದಿನ. ಈ ದಿನ ಮನೆ ಸ್ವಚ್ಛಗೊಳಿಸುವುದು, ಕ್ಷೌರ ಮಾಡುವುದು ಮುಂತಾದ ಸ್ವಚ್ಛತಾ ಕಾರ್ಯಗಳಿಂದ ಲಕ್ಷ್ಮೀ ಒಲಿಯುವಳು ಎನ್ನಲಾಗುತ್ತದೆ. ಉಳಿದಂತೆ ಯಾವ ದಿನಗಳೂ ಕೂದಲು ಕತ್ತರಿಸುವುದಕ್ಕೆ ಅಷ್ಟೊಂದು ಶುಭವಲ್ಲ.
ಆದರೆ ಇವೆಲ್ಲವೂ ನಿಮ್ಮ ನಿಮ್ಮ ನಂಬಿಕೆಗೆ ಬಿಟ್ಟದ್ದು. ಆದರೂ ನಿಮ್ಮ ನಂಬಿಕೆಗಳೇನೇ ಇರಲಿ, ಮನೆ ಹಿರಿಯರ ನಂಬಿಕೆಯನ್ನು ಗೌರವಿಸುವ ಸಲುವಾಗಿಯಾದರೂ ಈ ನಿಯಮ ಪಾಲಿಸುವುದರಿಂದೇನೂ ನಷ್ಟವಿಲ್ಲ ಎಂಬುದು ನಮ್ಮ ಅಭಿಪ್ರಾಯ.