ಫಲಿಸಲಿಲ್ಲ ಶತಕೋಟಿ ಭಾರತೀಯರ ಪ್ರಾರ್ಥನೆ | ಸೇನಾ ಹೆಲಿಕಾಪ್ಟರ್ ಪತನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಿಧಿವಶ
ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿ ಬಿಪಿನ್ ರಾವತ್ ಅವರು ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.
ಇಂದು ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ಸೇನಾ ಹೆಲಿಕಾಪ್ಟರ್ ಪತನದಲ್ಲಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿ 13 ಮಂದಿ ಮೃತಪಟ್ಟಿದ್ದಾರೆ.
ವೆಲ್ಲಿಂಗ್ಟನ್ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್ಗೆಂದು ಬಿಪಿನ್ ರಾವತ್ ಸೇರಿ 14 ಮಂದಿ ಹೆಲಿಕಾಪ್ಟರ್ನಲ್ಲಿ Mi-17V5 ಪ್ರಯಾಣಿಸುತ್ತಿದ್ದರು. ಇನ್ನೇನು ಕೆಲವೇ ಕ್ಷಣದಲ್ಲಿ ಲ್ಯಾಂಡಿಂಗ್ ಆಗಬೇಕು ಅನ್ನುವಷ್ಟರಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಿಪಿನ್ ರಾವತ್ ಅವರ ಚೇತರಿಕೆಗಾಗಿ ದೇಶದ ಜನತೆ ಸಲ್ಲಿಸಿದ ಪ್ರಾರ್ಥನೆ ಫಲಿಸಲಿಲ್ಲ. ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ.
1958ರ ಮಾರ್ಚ್ 16ರಂದು ಉತ್ತರಾಖಂಡ್ನ ಪೌರಿಯಲ್ಲಿ ಬಿಪಿನ್ ರಾವತ್ ಜನಿಸಿದ್ದರು. ಇವರದ್ದು ಸೇನಾ ಕುಟುಂಬವೇ ಆಗಿದ್ದರಿಂದ ದೇಶಭಕ್ತಿ ಇವರ ರಕ್ತದ ಕಣಕಣದಲ್ಲಿಯೂ ಹರಿಯುತ್ತಿತ್ತು. 1978ರಲ್ಲಿ ಗೂರ್ಖಾ ರೆಜಿಮೆಂಟ್ ಮೂಲಕ ಸೇನೆಗೆ ಸೇರಿಕೊಂಡರು. 2016ರಲ್ಲಿ ಭಾರತೀಯ ಸೇನಾ ಪಡೆ ಮುಖ್ಯಸ್ಥರಾಗಿ ನಿಯುಕ್ತಿಗೊಂಡರು. 1987ರಲ್ಲಿ ಅರುಣಾಚಲ ಪ್ರದೇಶದ ಸುಮದೋರೊಂಗ್ಚ್ಯ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಎದುರುಬದುರಾದ ಸಮಯದಲ್ಲಿ ರಾವತ್ ನೇತೃತ್ವದ ಬಟಾಲಿಯನ್ ಪ್ರಮುಖ ಪಾತ್ರ ವಹಿಸಿರುವು ಚಾನೆಲ್ ಉಲ್ಲೇಖಾರ್ಹ. 2015ರಲ್ಲಿ ಮಯನ್ಮಾರ್ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಇವರ ಪಾತ್ರ ಶ್ಲಾಘನೀಯ. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಹೋದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ರಾವತ್ ವಹಿಸಿದ್ದರು. 2019ರಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಭೂ ಸೇನೆ, ನೌಕಾ ಸೇನೆ ಮತ್ತು ವಾಯು ಸೇನೆ ಸೇರಿ ಮೂರು ಸೇನಾಪಡೆಗೂ ಇವರೇ ದಂಡನಾಯಕರಾಗಿದ್ದರು.
ಸೇನೆಯಲ್ಲಿ 42 ವರ್ಷಗಳ ಕಾಲ ಸೇವಾ ವೃತ್ತಿಜೀವನದ ಸಲ್ಲಿಸಿದ ಅವರ ವಿಶಿಷ್ಟ ಸೇವೆ ಮತ್ತು ಶೌರ್ಯಕ್ಕಾಗಿ ಹಲವಾರು ಪ್ರಶಸ್ತಿ ಸಂದಿವೆ. ಜನರಲ್ ಬಿಪಿನ್ ರಾವತ್ ಅವರಿಗೆ PVSM, UYSM, AVSM, YSM, SM ಮತ್ತು VSM ಸೇರಿದಂತೆ ಹಲವಾರು ರಾಷ್ಟ್ರಪತಿ ಪ್ರಶಸ್ತಿಗಳನ್ನು ನೀಡಲಾಗಿದೆ.
ಇಂದು ಮಿಲಿಟಲಿ ಶಾಲೆಯಲ್ಲಿ ಸೆಮಿನಾರ್ ಗೆಂದು ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಕರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯ್ತೇಜ್, ಹವಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ಸೇನಾ ಹೆಲಿಕಾಪ್ಟರ್ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್ ಪತನಗೊಂಡು ಬಿಪಿನ್ ರಾವತ್ ದಂಪತಿ 13 ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್ ಬಿಪಿನ್ ರಾವತ್ ನಿಧನಕ್ಕೇ ಇಡೀ ದೇಶವೇ ಕಂಬನಿ ಮಿಡಿದಿದೆ.
ಜನರಲ್ ರಾವತ್ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶದ ಸೇವೆಗೆ ಅವರು ಸಲ್ಲಿಸಿದ ಕೊಡುಗೆ ಅಪಾರವಾಗಿದ್ದು, ಅವರ ಸಾವು ವಿಷಾದ ತಂದಿದೆ ಮೂಡಿಸಿದೆ ಎಂದು ಮೋದಿ ತಿಳಿಸಿದ್ದಾರೆ.