ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಷ್ಠಮಂಗಲ ಪ್ರಶ್ನಾ ಚಿಂತನೆ ಬಗ್ಗೆ ಭಕ್ತಾಧಿಗಳ ಸಭೆ
ಬೆಳಂದೂರು: ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಮಾಡುವುದು ಪುಣ್ಯದ ಕಾರ್ಯ. ಭಕ್ತರ ಸಂಕಲ್ಪಗಳು ಗಟ್ಟಿಯಾದರೆ ಉದ್ದೇಶಿತ ಕಾರ್ಯ ಸಾಧ್ಯ. ನಮ್ಮ ಯೋಜನೆಗಳು, ಯೋಚನೆಗಳು ಅತ್ಯಂತ ಯಶಸ್ವಿಯಾಗಲು ಭಗವಂತನ ಅನುಗ್ರಹ ಪ್ರಾಪ್ತಿಯಾಗಿದ್ದು, ಮುಂದಿನ ದಿವಸಗಳಲ್ಲಿ ದೇವಸ್ಥಾನದ ಅಭಿವೃದ್ಧಿಗಳಿಗೆ ವೇಗವನ್ನು ಕೊಟ್ಟು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶದ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಭಗವಂತನು ಶಕ್ತಿಯನ್ನು ಕೊಡಲಿ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಅಷ್ಠಮಂಗಲ ಪ್ರಸ್ನಾ ಚಿಂತನೆಯ ಪ್ರಯುಕ್ತ ನ 28ರಂದು ನಡೆದ ಭಕ್ತರ ಸಭೆಯಲ್ಲಿ ಮಾತನಾಡಿದರು. ಊರಿನ ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಸುಂದರ ದೇವಸ್ಥಾನವಾಗಿ ನಿರ್ಮಾಣಗೊಂಡರೆ ನಮ್ಮ ಜೀವನವು ಸುಂದರಗೊಂಡ ಹಾಗೆ. ಭಕ್ತರು ಸಮರ್ಪಣ ಭಾವದಿಂದ ತೊಡಗಿಸಿಕೊಂಡಾಗ ಮಾತ್ರ ದೇವಸ್ಥಾನ ಅತೀ ಶೀಘ್ರದಲ್ಲಿ ನಿರ್ಮಾಣಗೊಳ್ಳಲು ಸಾಧ್ಯ. ದೇವರ ಇಚ್ಚೆ ಹಾಗೂ ಭಕ್ತರ ಶ್ರದ್ದೆಯಿಂದ ಕ್ಷೇತ್ರದ ಜೀರ್ಣೋದ್ದಾರಕ್ಕೆ ಸಮಯ ಕೂಡಿಬಂದಿದ್ದು, ಜೀರ್ಣೋದ್ಧಾರ ಸಂಕಲ್ಪ ಮಾಡಿದಂತೆ ಸಮಿತಿಯ ಮೂಲಕ ದೈವಜ್ಞರನ್ನು ಆಯ್ಕೆ ಮಾಡಲಾಗಿದ್ದು, ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಜನೇಶ್ ಭಟ್ ಮತ್ತು ವ್ಯವಸ್ಥಾಪನಾ ಸಮಿತಿಯವರ ನೇತೃತ್ವದಲ್ಲಿ ಎಲ್ಲಾ ಭಕ್ತರ ಸಹಕಾರದೊಂದಿಗೆ ಎಲ್ಲಾ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ದೇವಸ್ಥಾನದ ಅನುಂಶೀಯ ಮೊಕ್ತೇಸರರಾದ ಜನೇಶ್ ಭಟ್ ಬರೆಪ್ಪಾಡಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಜ್ಞದ ರೂಪದಲ್ಲಿ ಸ್ವೀಕಾರ ಮಾಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಬೇಕಾದ ಅವಶ್ಯಕತೆ ಇದೆ. ಆ ಮೂಲಕ ಪುರಾತನ ದೇವಸ್ಥಾನ ಜೀರ್ಣೋದ್ಧಾರಗೊಂಡು ಶೀಘ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿ ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಮನುಷ್ಯನಲ್ಲಿ ತಪ್ಪುಗಳು ಬರುವಂತದು ಸಹಜ. ಅ ತಪ್ಪುಗಳನ್ನು ತಿದ್ದಿಕೊಂಡು ಹೋಗುವಂತದ್ದು ನಮ್ಮಲ್ಲಿರಬೇಕು. ಯಾವುದೇ ಒಂದು ದೇವಸ್ಥಾನದ ಜೀರ್ಣೋದ್ಧಾರ ಅಥವಾ ಸಮಾಜದ ಕೆಲಸ ಮಾಡುವ ಸಂದರ್ಭದಲ್ಲಿ ಹಿರಿಯರ, ಅನುಭವಿಗಳ ಅಭಿಪ್ರಾಯವನ್ನು ತೆಗೆದುಕೊಂಡು ಯುವಕರಿಗೆ ಅವಕಾಶಗಳನ್ನು ಕೊಟ್ಟು ಎಲ್ಲಾ ಮನಸ್ಸುಗಳನ್ನು ಒಂದುಗೂಡಿಸಿಕೊಂಡು ಹೋಗಬೇಕಾಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸುಳ್ಯ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಯೋಗ ನಮಗೆ ಸಿಕ್ಕಿದೆ. ಮುಂದೆ ನಡೆಯುವ ದೇವಸ್ಥಾನದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕಾಗುತ್ತದೆ. ಸಾಂಪ್ರಾದಾಯ ಪ್ರಕಾರವೇ ಸುಂದರ ದೇವಸ್ಥಾನ ನಿರ್ಮಾಣಗೊಳ್ಳಲಿ ಎಂದರು.
ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚೆನ್ನಪ್ಪ ಗೌಡ ನೂಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಐತ್ತಪ್ಪ ಗೌಡ ಕುವೆತ್ತೋಡಿ, ಜತ್ತಪ್ಪ ರೈ ಬರೆಪ್ಪಾಡಿ, ರಮೇಶ್ ಕೆ.ಎನ್. ಕಾರ್ಲಾಡಿ. ನಿರ್ಮಲ ಕೇಶವ ಗೌಡ ಅಮೈ, ಪುಷ್ಪಲತಾ ಪದ್ಮಯ್ಯ ದರ್ಖಾಸು ಕುದ್ಮಾರು, ಯಶೋದ ನಾಯ್ಕ ಎರ್ಕಮೆ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ರಮೇಶ್ ಕೆ.ಎನ್ ಕಾರ್ಲಾಡಿ ಸ್ವಾಗತಿಸಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಬೈಲುವಾರು ಸಮಿತಿ ರಚನೆ: ದೇವಸ್ಥಾನದ ಮುಂದಿನ ಎಲ್ಲಾ ಅಭಿವೃದ್ದಿ ಕಾರ್ಯಗಳ ಉದ್ದೇಶವನ್ನು ಇಟ್ಟುಕೊಂಡು ಬೈಲುವಾರು ಸಮಿತಿಗಳನ್ನು ರಚಿಸಲಾಯಿತು. ಪ್ರತಿ ಬೈಲುವಾರು ಸಮಿತಿಗೆ ಸಂಚಾಲಕರನ್ನಾಗಿ ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.