ತನ್ನದೇ ಆದ ಪ್ರಾಮುಖ್ಯ ಹಾಗೂ ವೈಶಿಷ್ಟ್ಯ ಹೊಂದಿರುವ ನಮ್ಮ ಸಂವಿಧಾನದ ಸಮರ್ಪಕ ಅನುಷ್ಠಾನ ಅಗತ್ಯ-ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ

ಸುಬ್ರಹ್ಮಣ್ಯ: ಭಾರತದ ಸಂವಿಧಾನ ತನ್ನದೇ ಆದ ಪ್ರಾಮುಖ್ಯ ಹಾಗೂ ವೈಶಿಷ್ಟ್ಯಹೊಂದಿದೆ. ಆದರೆ ಅದರ ಆಶಯಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಕೆಲವೊಂದು ಪ್ರಕರಣಗಳು 30 ವರ್ಷ ಕಳೆದರೂ ತೀರ್ಪು ಬರುತ್ತಿಲ್ಲ. ಅಂದರೆ ನಮ್ಮ ಸಂವಿಧಾನ ಇನ್ನಷ್ಟು ಸದೃಢವಾಗಿ ಅನುಷ್ಠಾನವಾಗಬೇಕಿದೆ ಎಂದು ಕೇಂದ್ರ ಸರಕಾರದ ಸಾಮಾಜಿಕ ಮತ್ತು ಸಶಕ್ತೀಕರಣ ಸಹಾಯಕ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.

ಸಂವಿಧಾನ ದಿನಾಚರಣೆ ಪ್ರಯುಕ್ತ ಸುಬ್ರಹ್ಮಣ್ಯದಲ್ಲಿ ಶನಿವಾರ ನಡೆದ “ಸಂವಿಧಾನ ಸಂಭ್ರಮ’ ವಿಚಾರ ಸಂಕಿರಣದಲ್ಲಿ ಅವರು ಪ್ರಮುಖ ಭಾಷಣ ಮಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಎಷ್ಟೋ ಮಂದಿ ಬಲಿದಾನ ಮಾಡಿದ್ದಾರೆ. ಸ್ವಾತಂತ್ರ್ಯ ಯಾರೋ ಕೊಟ್ಟ ಭಿಕ್ಷೆ ಅಲ್ಲ. ಅದರದ್ದೇ ಆದ ಮಹತ್ವ, ಹಿನ್ನೆಲೆ ಇದೆ. ದೇಶದಲ್ಲಿ ಆರ್ಥಿಕ ಅಸಮಾನತೆ, ವರ್ಗ ಭೇದ ಕಿತ್ತೂಗೆಯಬೇಕು ಎಂಬುದು ಸಂವಿಧಾನದ ನಿಲುವಾಗಿತ್ತು. ಆದರೆ ಇಂದಿಗೂ ಅದರ ಅನುಷ್ಠಾನ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎಂದರು.

ದೇಶಕ್ಕೆ ಯಾಕೆ ಸ್ವಾತಂತ್ರ್ಯ ಬೇಕಿತ್ತು ಎಂಬುದು ಪ್ರಶ್ನಾತೀತ. ಆದರೆ 1947ರಲ್ಲಿ ದೇಶ ಯಾಕೆ ಇಬ್ಭಾಗವಾಯಿತು. ಅಂಬೇಡ್ಕರ್‌ ಅವರನ್ನು ಸೋಲಿಸಲು ಕುತಂತ್ರ ಮಾಡಲಾಯಿತು; ಸಂವಿಧಾನ ಶಿಲ್ಪಿಯನ್ನು ಸಂಸತ್‌ ಪ್ರವೇಶಿಸದಂತೆ ಮಾಡಲಾಯಿತು. ಆದರೆ ಈ ಗಂಭೀರ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಚರ್ಚೆಗಳು ನಡೆಯಲಿಲ್ಲ ಎಂದು ವಿಷಾದಿಸಿದರು.

ವ್ಯವಸ್ಥೆಯನ್ನು ತಿಧ್ದೋಣ
ರಾಜ್ಯದಲ್ಲಿ ಮೀಸಲಾತಿ ಹೋರಾಟ ದಿಕ್ಕು ತಪ್ಪುತ್ತಿದೆ. ಜಾಗೃತ ಸಮಾಜ ಒಟ್ಟು ವ್ಯವಸ್ಥೆಯನ್ನು ತಿದ್ದುವ ದಿಕ್ಕಿನಲ್ಲಿ ಹೋರಾಟ ನಡೆಸಬೇಕು ಎಂದರು.

ಸಚಿವ ಎಸ್‌. ಅಂಗಾರ ಮಾತನಾಡಿ, ಸಂವಿಧಾನದ ವಿಚಾರಧಾರೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಇದರಿಂದ ಬದುಕಿ ಔನ್ನತ್ಯ ಸಾಧ್ಯ. ಸಂವಿಧಾನದ ಮೇಲೆ ಸರ್ವರೂ ನಂಬಿಕೆ ಇಟ್ಟು ಪಾಲನೆ ಮಾಡಬೇಕು ಎಂದರು.

ಸಂವಾದ
ಸಚಿವ ಎ. ನಾರಾಯಣ ಸ್ವಾಮಿ ಅವರು ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮಾಧ್ಯಮಗಳು ಸಂವಿಧಾನದ ಜಾಗೃತಿಯನ್ನು ಹೇಗೆ ಮಾಡಬಹುದು ಎಂದು ವಿದ್ಯಾರ್ಥಿನಿ ಚುಂಚನಾ ಪ್ರಶ್ನಿಸಿದರು. ಸಚಿವರು ಉತ್ತರಿಸಿ, ಸಂವಿಧಾನದ ಬಗ್ಗೆ ಚರ್ಚೆ ಮತ್ತು ಸಂವಾದಗಳ ಮೂಲಕ ಜನತೆಯಲ್ಲಿ ಮತ್ತು ಯುವ ಜನತೆಯಲ್ಲಿ ಸಂವಿಧಾನದ ಜಾಗೃತಿ ಮೂಡಿಸಬಹುದು ಎಂದರು.

ಸಮ್ಮಾನ
ಎ. ನಾರಾಯಣ ಸ್ವಾಮಿ ಅವರನ್ನು ಸಚಿವ ಎಸ್‌. ಅಂಗಾರ ಸಮ್ಮಾನಿಸಿದರು. ಇದೇ ವೇಳೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರಿಗೆ 6ನೇ ವೇತನ ಜಾರಿಯಾಗುವಂತೆ ಮಾಡಿದ ಸಚಿವ ಎಸ್‌. ಅಂಗಾರ ಅವರನ್ನು ದೇವಸ್ಥಾನದ ಸಿಬ್ಬಂದಿಯ ಪರವಾಗಿ ಸಚಿವ ಎ. ನಾರಾಯಣ ಸ್ವಾಮಿ ಸಮಾನಿಸಿದರು.

ಕುಕ್ಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾ.ನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಜಿ.ಪಂ. ಮಾಜಿ ಸದಸ್ಯ ಹರೀಶ್‌ ಕಂಜಿಪಿಲಿ ವೇದಿಕೆಯಲ್ಲಿದ್ದರು.
ಯತೀಶ್‌ ಅರ್ವಾರ ಸ್ವಾಗತಿಸಿ, ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್‌ ನಾಯಕ್‌ ವಂದಿಸಿದರು. ಉಪನ್ಯಾಸಕರಾದ ಆರತಿ ಮತ್ತು ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.