ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ !!| ಏರ್ ಟೆಲ್ ಬೆನ್ನಲ್ಲೇ ಪ್ರೀಪೇಯ್ಡ್ ಸೇವೆಯ ದರವನ್ನು ಹೆಚ್ಚಿಸಿದೆ ಈ ಟೆಲಿಕಾಂ ಸಂಸ್ಥೆ

ಏರ್‌ಟೆಲ್ ಸಂಸ್ಥೆ ನಿನ್ನೆ ಪ್ರಿಪೇಯ್ಡ್ ಬಳಕೆದಾರರಿಗೆ 20-25 ಪ್ರತಿಶತದಷ್ಟು ಸುಂಕವನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು.ಇದೀಗ ಇದರ ಬೆನ್ನಲ್ಲೇ,ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿರುವ ವೊಡಾಫೋನ್ ಐಡಿಯಾ ಕೂಡ ತನ್ನ ಪ್ರಿಪೇಯ್ಡ್ ಸೇವೆಯ ದರಗಳನ್ನು ಹೆಚ್ಚಿಸುವ ನಿರ್ಧಾರದ ಕುರಿತು ಪ್ರಕಟಿಸಿದೆ.

ಪ್ರಿಪೇಯ್ಡ್ ಸೇವೆಗಳಲ್ಲಿನ ಪ್ರಸ್ತುತದ ದರದಲ್ಲಿ ಶೇ.20-25ರಷ್ಟು ಟಾರಿಫ್ ಏರಿಕೆಯಾಗಲಿದೆ ಎಂದು ತಿಳಿಸಲಾಗಿದ್ದು, ಹೊಸ ದರ ನವೆಂಬವರ್ 25ರಿಂದ ಜಾರಿಗೆ ಬರಲಿದೆ. ಕಂಪನಿಯ ಈ ನಿರ್ಧಾರದಿಂದಾಗಿ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ ಹೆಚ್ಚಾಗಲಿದ್ದು, ಪ್ರಸ್ತುತ ಕಂಪನಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಸರಿದೂಗಿಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸ್ಥಿರ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ನೆಟ್‌ವರ್ಕ್ ಟೆಸ್ಟಿಂಗ್ ಅಪ್ಲಿಕೇಶನ್‌ಗಳ ಕಂಪನಿ ಓಕ್ಲಾ ಪರಿಶೀಲಿಸಿರುವಂತೆ, ಹೊಸ ಸುಂಕದ ಯೋಜನೆಗಳ ಮುಖಾಂತರ ‘ಭಾರತದ ವೇಗದ ಮೊಬೈಲ್ ನೆಟ್‌ವರ್ಕ್ ಅನ್ನು ಮತ್ತಷ್ಟು ಸುಧಾರಿಸಲು ಸಹಾಯವಾಗುತ್ತದೆ’ ಎಂದು ವಿಐ ಸಂಸ್ಥೆ ಹೇಳಿದೆ.ಸರ್ಕಾರದ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಸಾಕ್ಷಾತ್ಕಾರಗೊಳಿಸಲು ತನ್ನ ಪಾತ್ರವನ್ನು ನಿರ್ವಹಿಸುವುದಕ್ಕೆ ವೊಡಾಫೋನ್ ಇಂಡಿಯಾ ಬದ್ಧವಾಗಿದೆ. ತನ್ನ ಗ್ರಾಹಕರಿಗೆ ಸರಳ ಮತ್ತು ಅನುಕೂಲಕರ ಉತ್ಪನ್ನಗಳನ್ನು ಒದಗಿಸುವ ಬದ್ಧತೆಗೆ ಅನುಗುಣವಾಗಿ, ಸಂಸ್ಥೆ ಧ್ವನಿ ಮತ್ತು ಡೇಟಾ ಎರಡಕ್ಕೂ ಅತ್ಯುತ್ತಮವಾದ ಯೋಜನೆಗಳನ್ನು ನೀಡಲಿದೆ ಎಂದು ವೊಡಾಫೋನ್ ಐಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Leave A Reply

Your email address will not be published.