ಆಲಂಕಾರು ಹಿರಿಯ ಪ್ರಾಥಮಿಕ ಶಾಲೆ
ವಾಟರ್ ಬೆಲ್ ಮತ್ತು ಅಕ್ಷಯ ಬುಟ್ಟಿ ಯೋಜನೆ , ಪೂರ್ವ ಪ್ರಾಥಮಿಕ ಶಾಲೆ ತರಗತಿಗಳ ಉದ್ಘಾಟನೆ
ಕಡಬ: ಶೈಕ್ಷಣಿಕ ಗುಣಮಟ್ಟ , ಕಲಿಕಾ ವಾತವರಣ ಸ್ವಚ್ಚವಾಗಿದ್ದರೆ ಜನ ಶಿಕ್ಷಣ ಸಂಸ್ಥೆಯನ್ನು ಮೆಚ್ಚಿಕೊಂಡು ಮಕ್ಕಳನ್ನು ದಾಖಲಿಸುತ್ತಾರೆ ಎನ್ನುವುದಕ್ಕೆ ಆಲಂಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದಾಹರಣೆಯಾಗಿದೆ. ಇಲ್ಲಿ ಪೋಷಕರ ಆಶಯವನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. . ಪೋಷಕರ, ಸಹೋದ್ಯೋಗಿಗಳ, ಶಿಕ್ಷಣ ಪ್ರೇಮಿಗಳ, ಮೇಲಾಧಿಕಾರಿಗಳ ನೆರವಿನಿಂದ ಶಾಲೆ ಈ ಮಟ್ಟಕ್ಕೆ ಬೆಳೆದಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಹೇಳಿದರು.
ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಾಟರ್ ಬೆಲ್ ಮತ್ತು ಅಕ್ಷಯ ಬುಟ್ಟಿ ಯೋಜನೆ , ಪೂರ್ವ ಪ್ರಾಥಮಿಕ ಶಾಲೆ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಇಂಗ್ಲೀಷ್ ಕಲಿಕೆಗೆ ಹೆಚ್ಚು ಮಹತ್ವ ನೀಡುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡ ಎಲ್‌ಕೆಜಿ, ಯುಕೆಜಿ ಈ ಬಾರಿ ಅತ್ಯಂತ ಜನಾಕರ್ಷಣೆಗೊಂಡಿದೆ. ಮುಖ್ಯವಾಗಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿದ್ದು, ವಿಶಾಲ ಆಟದ ಮೈದಾನ, ಶಿಸ್ತುಬದ್ದ ಶಿಕ್ಷಕ ವೃಂದದ ಸಮಯಪಾಲನೆ, ಪಠ್ಯ ಹಾಗೂ ಪಠ್ಯೇತರ ಶಿಕ್ಷಣದ ಬಗ್ಗೆ ಸಮಗ್ರ ಮಾಹಿತಿ, ಕ್ರೀಡೆ, ಸ್ವಾವಲಂಬನೆ ಬದುಕಿನ ಶಿಕ್ಷಣ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದೆ . ಶಾಲೆಗೆ ಸೇರ್ಪಡೆಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ದಯಾನಂದ ಪೂಜಾರಿ ಮಡ್ಯೋಟ್ಟು ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಕ್ಲಸ್ಟರ್ ಸಿ ಆರ್ ಪಿ ಮಹೇಶ್ , ಎಸ್ ಡಿ ಎಂ ಸಿ ಉಪಾಧ್ಯಕ್ಷೆ ತ್ರಿವೇಣಿ, ಎಲ್‌ಕೆಜಿ ಯುಕೆಜಿ ಪೂಷಕರ ಸಮಿತಿ ಅಧ್ಯಕ್ಷ ನವೀನ್ ರೈ, ದಾನಿ ಮುತ್ತಪ್ಪ ಪೂಜಾರಿ ನೈಯಲ್ಗ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ಲಿಂಗರಾಜು ಪ್ರಸ್ತಾವಿಸಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವನಜಾ ವಂದಿಸಿದರು. ಶಿಕ್ಷಕ ಜಯಪ್ರಕಾಶ್ ನಿರೂಪಿಸಿದರು.
ಅಕ್ಷಯ ಬುಟ್ಟಿ ಯೋಜನೆ
ಪ್ರತಿಯೊಬ್ಬ ವಿದ್ಯಾರ್ಥಿಯಿಂದ ತರಕಾರಿ ಕಾಣಿಕೆ
ಅಪೌಷ್ಟಿಕತೆ ಹೋಗಲಾಡಿಸಲು ಶಾಲೆಯಲ್ಲಿ ಸರ್ಕಾರದ ಅಕ್ಷಯ ಬುಟ್ಟಿ ಯೋಜನೆಯನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳ ಮನೆಯಲ್ಲಿ ಬೆಳೆದ ತರಕಾರಿಗಳನ್ನು ಅಲ್ಪ್ಟ ಪ್ರಮಾಣದಲ್ಲಿಯಾದರೂ ಪ್ರತಿದಿನ ಪ್ರತಿಯೊಬ್ಬ ವಿದ್ಯಾರ್ಥಿ ಶಾಲೆಗೆ ತಂದು ಸಮರ್ಪಿಸುವುದು. ಇದನ್ನು ಮಧ್ಯಾಹ್ನದ ಬಿಸಿಯೂಟದ ಸಾಂಬಾರಿಗೆ ಬಳಕೆ ಮಾಡುವುದು ಯೋಜನೆಯ ಉದ್ದೇಶ. ಇದರ ಭಾಗವಾಗಿ ಆಲಂಕಾರು ಸರ್ಕಾರಿ ಶಾಲೆಯಲ್ಲಿ ಯೋಜನೆಯನ್ನು ಅನುಷ್ಠಾನಿಸಲಾಯಿತು. ಪೋಷಕರಿಂದ , ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.