Mysore : ಬ್ಯಾಂಕ್ ನಲ್ಲಿ ಚಿನ್ನ ಅಡವಿಡುವ ಗ್ರಾಹಕರೇ ಹುಷಾರ್- ಮೈಸೂರು ಕೆನರಾ ಬ್ಯಾಂಕ್ ನಲ್ಲಿ ಚಿನ್ನ ಇಟ್ಟವರಿಗೆ ಪಂಗನಾಮ


Mysore : ಕಷ್ಟದ ಸಂದರ್ಭದಲ್ಲಿ ಅನೇಕರು ಗೋಲ್ಡ್ ಲೋನ್ ಅನ್ನು ಪಡೆಯುತ್ತಾರೆ. ಅಂದರೆ ಬ್ಯಾಂಕ್ ನಲ್ಲಿ ತಮ್ಮ ಚಿನ್ನಾಭರಣಗಳನ್ನು ಇಟ್ಟು ಸಾಲವನ್ನು ಪಡೆಯುತ್ತಾರೆ. ನಂತರ ಹಣ ಹೊಂದಿಸಿ ಆ ಚಿನ್ನವನ್ನು ಬಿಡಿಸಿಕೊಳ್ಳುತ್ತಾರೆ. ಆದರೆ ನಂಬಿಕೆ ಇಟ್ಟು ಬ್ಯಾಂಕಿನಲ್ಲಿ ಚಿನ್ನ ಬಿಟ್ಟರೂ ಕೂಡ ಮೋಸವಾಗುತ್ತದೆ ಎಂಬುದು ಬಯಲಾಗಿದೆ.

ಹೌದು, ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್‌ನ ಅಧಿಕೃತ ಅಕ್ಕಸಾಲಿಗ (Appraiser) ಅಶ್ವಿನ್ ಆಚಾರ್ ಎಂಬುವವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಅಶ್ವಿನ್ ಆಚಾರ್ ಅವರು 2014ರಿಂದ ಕೆನರಾ ಬ್ಯಾಂಕ್‌ನಲ್ಲಿ ಅಕ್ಕಸಾಲಿಗರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ಕೆಲವು ಗ್ರಾಹಕರು ಬ್ಯಾಂಕಿನಲ್ಲಿ ಇಟ್ಟ ಚಿನ್ನವನ್ನು ಬಿಡಿಸಿಕೊಂಡ ಬಳಿಕ ತಮ್ಮ ಚಿನ್ನದ ತೂಕದಲ್ಲಿ ಕಡಿಮೆಯಾಗಿರುವ ಕುರಿತು ದೂರನ್ನು ನೀಡಿದ್ದರು. ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಕೆಲವು ಗ್ರಾಹಕರು ಚಿನ್ನದ ತೂಕ ಕಡಿಮೆಯಾಗಿರುವ ಕುರಿತು ಕಂಪ್ಲೇಂಟ್ ಮಾಡಿದ್ದಾರೆ.
ಗ್ರಾಹಕರ ಸರಣಿ ದೂರುಗಳಿಂದ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ ಮತ್ತು ಪ್ರಾದೇಶಿಕ ವ್ಯವಸ್ಥಾಪಕರಾದ ರಾಜಶೇಖರ್ ಅವರು ಆಭರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ತೂಕದಲ್ಲಿ ವ್ಯತ್ಯಾಸವಿರುವುದು ದೃಢಪಟ್ಟಿದೆ. ಅಕ್ಕಸಾಲಿಗ ಅಶ್ವಿನ್ ಆಚಾರ್ ಅವರು ಗ್ರಾಹಕರು ನಂಬಿಕೆಯಿಂದ ಇಟ್ಟಿದ್ದ ಚಿನ್ನದಲ್ಲಿ ಕೈಚಳಕ ತೋರಿಸಿ ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ರಾಜಶೇಖರ್ ಅವರು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಮೈಸೂರಿನ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.