ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿ ಕುರಿತು ಮಹತ್ವದ ಮಾಹಿತಿ


ಕೊಡಗು: ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯನ್ನು ನಿಖರವಾಗಿ ದಾಖಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಡುತ್ತಾ, ರಾಷ್ಟ್ರದ ನಾಗರಿಕ ನೋಂದಣಿ ಜನನ ಮತ್ತು ಮರಣ ಅಧಿನಿಯಮ 1960 ರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ 1970 ಮತ್ತು ಪುನರ್ ರಚಿತ ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ ನಿಯಮ 1990 ರ ಅನ್ವಯ ಜನನ ಮತ್ತು ಮರಣ ನೋಂದಣಿ ಕಡ್ಡಾಯವಾಗಿದ್ದು ಆ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಈ ಕೆಲಸ ಆಗಬೇಕು ಎಂದು ಹೇಳಿದರು.
ಪ್ರಸ್ತುತ ಜನನ ಮತ್ತು ಮರಣ ನೋಂದಣಿಯನ್ನು ಗ್ರಾಮೀಣ ಭಾಗದಲ್ಲಿ 2015 ರ ಎಪ್ರಿಲ್ 01 ರಿಂದ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ ಜನ್ಮ ತಂತ್ರಾಂಶದ ಮೂಲಕ ಆನ್ಲೈನ್ ನೋಂದಣಿ ನಿರ್ವಹಣೆ ಮಾಡಲಾಗುತ್ತಿದ್ದು ಈ ಕಾರ್ಯದ ಪ್ರಗತಿಯನ್ನು ಸಾಧಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.
ಜನನ ಮತ್ತು ಮರಣ ನೋಂದಣಿ ಸಂಬಂಧಿಸಿದಂತೆ ಆಯಾಯ ಕಾಲದಲ್ಲಿ ಪಡೆಯುವಂತಾಗಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಆಯಾಯ ಕಾಲದಲ್ಲಿಯೇ ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.
ಈಗಾಗಲೇ ಜನನ ಮತ್ತು ಮರಣ ನೋಂದಣಿಯನ್ನು ಗ್ರಾ.ಪಂ.ಕಾರ್ಯದರ್ಶಿಯವರನ್ನು ಉಪ ನೋಂದಣಾಧಿಕಾರಿಯಾಗಿ ನೇಮಿಸಲಾಗಿದೆ. ಆ ನಿಟ್ಟಿನಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ 30 ದಿನದೊಳಗೆ ಜನನ ಮತ್ತು ಮರಣ ನೋಂದಣಿ ಮಾಡಬೇಕು. 30 ದಿನದ ನಂತರ ಗ್ರಾಮ ಆಡಳಿತ ಅಧಿಕಾರಿಯನ್ನು ನೋಂದಣಿ ಅಧಿಕಾರಿಯಾಗಿ ನೇಮಿಸಲಾಗಿದ್ದು, ಈ ನೋಂದಣಿಯನ್ನು 30 ದಿನದೊಳಗೆ ಇ-ಜನ್ಮ ತಂತ್ರಾಂಶದಲ್ಲಿ ದಾಖಲು ಮಾಡಬೇಕು ಎಂದರು.
ಈಗಾಗಲೇ ದತ್ತು ಮಕ್ಕಳ ಜನನ ಪ್ರಮಾಣ ಪತ್ರವನ್ನು 2022 ರ ಸೆಕ್ಷನ್ 40 ಮತ್ತು 48 ರಂತೆ ತಿದ್ದುಪಡಿ ಮಾಡಲಾಗಿದ್ದು, ಯಾವುದೇ ಏಜೆನ್ಸಿಗಳು ದತ್ತು ಮಕ್ಕಳನ್ನು ಪಡೆಯಲು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡು ಜನನ ಪ್ರಮಾಣ ಪತ್ರವನ್ನು ನಿಯಮಾನುಸಾರ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಯಲ್ಲಿ ಸರಳೀಕರಣಗೊಳಿಸುವ ಮತ್ತು ನಾಗರಿಕ ಸ್ನೇಹಿ ಮಾಡುವಲ್ಲಿ ಮುಂದಾಗಲಾಗಿದ್ದು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಜನಿಸುವ ಮಗುವಿನ ಜನನ ಪ್ರಮಾಣ ಪತ್ರವನ್ನು ಎರಡು ಮೂರು ದಿನದೊಳಗೆ ಪಡೆಯಬಹುದಾಗಿದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆರೋಗ್ಯ ಅಧಿಕಾರಿಯವರು ನೋಂದಣಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಜಿಲ್ಲಾ ಸಾಂಖ್ಯಿಕ ಇಲಾಖೆಯ ಅಧಿಕಾರಿ ನಾರಾಯಣ ಅವರು ಮಾತನಾಡಿ ಜನನ ಮತ್ತು ಮರಣವನ್ನು ವಿವಿಧ ಹಂತದಲ್ಲಿ ದಾಖಲಿಸಲಾಗುತ್ತದೆ ಎಂದರು.2025 ರ ಜನವರಿ, 01 ರಿಂದ ನವೆಂಬರ್ ಅಂತ್ಯದ ವರೆಗೆ ಕೊಡಗು ಜಿಲ್ಲೆಯಲ್ಲಿ ಒಟ್ಟು ಗ್ರಾಮೀಣ ಪ್ರದೇಶದಲ್ಲಿ 330 ಮತ್ತು ನಗರ ಪ್ರದೇಶದಲ್ಲಿ 8 ಒಟ್ಟು 338 ನೋಂದಣಿ ಘಟಕಗಳನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಜನನ ಮರಣ ಉಪ ನೋಂದಣಿ ಘಟಕವನ್ನು ಸ್ಥಾಪಿಸಿ ಈ ಸಂಸ್ಥೆಗಳಲ್ಲಿ ಸಂಭವಿಸುವ ಜನನ ಮತ್ತು ಮರಣ ಘಟನೆಗಳನ್ನು ನೋಂದಣಿ ಮಾಡಿ, ಅರ್ಜಿದಾರರಿಗೆ ನಿಗದಿತ ಸಮಯದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲು ಕ್ರಮವಹಿಸಲಾಗಿದೆ ಎಂದರು.ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಘಟನೆಗಳನ್ನು 21 ದಿನದೊಳಗೆ ನೋಂದಣಿ ಮಾಡಲು ಅನುಕೂಲವಾಗುವಂತೆ ಸಂಬಂಧಿಸಿದ ಜನನ ಮತ್ತು ಮರಣ ನೋಂದಣಾಧಿಕಾರಿಗಳಿಗೆ ವರದಿ ಮಾಡಲು ತಿಳಿಸಲಾಗಿದೆ ಎಂದು ನಾರಾಯಣ ಅವರು ಹೇಳಿದರು.
ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಸಹಾಯಕ ಸಾಂಖ್ಯಿಕ ಅಧಿಕಾರಿ ಟಿ.ವೆಂಕಟೇಶ್, ಬಿ.ಎಂ.ಗಾನವಿ, ಇತರರು ಇದ್ದರು.
ಮತ್ತಷ್ಟು ಮಾಹಿತಿ: ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಜನನ ಮರಣ ಘಟನೆಗಳನ್ನು ಸಂಭವಿಸಿದ 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿ ಪ್ರಮಾಣ ಪತ್ರವನ್ನು ವಿತರಿಸುವುದು. ಇದರಿಂದ ಮಗುವಿನ ಜನನ ಪ್ರಮಾಣ ಪತ್ರವು ತಾಯಿಯು ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಮೊದಲು ವಿತರಿಸಿದಲ್ಲಿ ಅನುಕೂಲವಾಗಲಿದೆ.
ಎಲ್ಲಾ ಖಾಸಗಿ ಆಸ್ಪತ್ರೆಗಳು ಜನನ ಮರಣ ಘಟನೆಗಳನ್ನು ಎರಡು ಮೂರು ದಿನಗಳೊಳಗೆ ಸಂಬಂಧಿಸಿದ ಜನನ ಮರಣ ನೋಂದಣಾಧಿಕಾರಿಗಳಿಗೆ ವರದಿ ಮಾಡುವುದು. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಜನನ ಮರಣ ಘಟನೆಗಳನ್ನು ಸಂಬಂಧಪಟ್ಟ ಜನನ ಮರಣ ನೋಂದಣಾಧಿಕಾರಿಗಳಿಗೆ ವರದಿ ಮಾಡಲು ವಿಳಂಬ ಮಾಡುತ್ತಿದ್ದು. ಇದರಿಂದ ಸಾರ್ವಜನಿಕ ಅನಾನುಕೂಲ ಉಂಟಾಗುತ್ತಿದ್ದು ಸದರಿ ವಿಷಯವನ್ನು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಐಡಿಸಿಸಿ ಸಭೆಗಳ ಕಾರ್ಯಸೂಚಿ ಅಂಶಗಳಲ್ಲಿ ಸೇರಿಸಿಕೊಳ್ಳುವುದು.
ಎಲ್ಲಾ ಆಸ್ಪತ್ರೆಗಳಲ್ಲಿ ಜನನ ಮರಣ ಘಟನೆಗಳು ಸಂಭವಿಸಿರುವ ಮಾಹಿತಿಯ ಪಟ್ಟಿಯನ್ನು ಇರಿಸುವುದು. ಇದರಿಂದ ಜನನ ಮರಣ ವರದಿಗಳ ಸಂಪೂರ್ಣತೆಯನ್ನು ಮೇಲ್ವಿಚಾರಣೆ ಮಾಡಬಹುದು. ಮತ್ತು ಅನುಸರಣಾ ವರದಿಯನ್ನು ಪಡೆಯಬಹುದು.
ಜನನ ಮರಣ ಪ್ರಮಾಣ ಪತ್ರಗಳ ನೋಂದಣಿ ವಂಚನೆಯ ಚಟುವಟಿಕೆಗಳನ್ನು ತಡೆಗಟ್ಟುವ ಕ್ರಮಗಳಿಗೆ ಸಂಬಂಧಿಸಿದಂತೆ ಜನನ ಮರಣ ನೋಂದಣಾಧಿಕಾರಿಗಳು/ ಉಪ ನೋಂದಣಾಧಿಕಾರಿಗಳು ತಮ್ಮ ಬಳಕೆದಾರರ ಐಡಿ ಪಾಸ್ವರ್ಡ್ ಮತ್ತು ಮೊಬೈಲ್ ಓಟಿಪಿ ಗಳನ್ನು ಹಂಚಿಕೊಳ್ಳದಂತೆ ಮತ್ತು ಆಗಾಗ್ಗೆ ಪಾಸ್ ವರ್ಡ್ ಬದಲಾಯಿಸುವ ಅಗತ್ಯತೆಯ ಬಗ್ಗೆ ಎಲ್ಲಾ ಜನನ ಮರಣ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡುವುದು.
ಕೈಬರಹದ ಜನನ ಮರಣ ಪ್ರಮಾಣ ಪತ್ರಗಳನ್ನು ಡಿಜಿಟಲೀಕರಣಗೊಳಿಸುವ ಮೊದಲ ಜನನ ಮರಣ ನೋಂದಣಾಧಿಕಾರಿಗಳಿಂದ ಕೈಬರಹದ ಜನನ ಮರಣ ಪ್ರಮಾಣ ಪತ್ರಗಳ ದೃಡೀಕರಣವನ್ನು ಪರಿಶೀಲಿಸಿ ಮುಂದಿನ ಕ್ರಮವಹಿಸಲು ಸೂಚಿಸಿರುತ್ತಾರೆ. ಇದಲ್ಲದೇ ಸಾರ್ವಜನಿಕ ಫಿಶಿಂಗ್ ಸೈಟ್ಗಳ (ನಕಲಿ ಜಾಲತಾಣಗಳು) ಬಗ್ಗೆ, ಅರಿವು ಮೂಡಿಸುವ ಹಾಗೂ ಈ ಸಂಬಂಧ ಭಾರತದ ಮಹಾ ನೋಂದಣಾಧಿಕಾರಿಗಳು ಹೊರಡಿಸುವ ಮಾರ್ಗಸೂಚಿಗಳನ್ನು ಕಟ್ಟಿನಿಟ್ಟಾಗಿ ಪಾಲಿಸುವುದು.
ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ವೈದ್ಯಕೀಯವಾಗಿ ಪ್ರಮಾಣೀಕರಿಸಿದ ಮರಣ ಕಾರಣ ಪ್ರಮಾಣ ಪತ್ರಗಳನ್ನು (ಎಂಸಿಸಿಡಿ) ಜನನ ಮರಣ ಮುಖ್ಯ ನೋಂದಣಾಧಿಕಾರಿಗಳ ಕಛೇರಿಗೆ ಹಾಗೂ ಒಂದು ಪ್ರತಿಯನ್ನು ಮೃತರ ಸಂಬಂಧಿಕರಿಗೆ ಒದಗಿಸುವುದನ್ನು 1969 ರ ಜನನ ಮರಣ ನೋಂದಣಿ ತಿದ್ದುಪಡಿ ಅಧಿನಿಯಮ 2023 ರ ಸೆಕ್ಷನ್ 10 ರಲ್ಲಿ ಕಡ್ಡಾಯಗೊಳಿಸಲಾಗಿದೆ. ಎಂದರು.

Comments are closed.