Suhana Syed: ‘ಅನ್ಯ ಕೋಮಿನವರಾದ ನಮ್ಮ ಮದುವೆ ಮಾಡಿಸಿದ್ದೇ ರಾಯರು’- ಗಾಯಕಿ ಸುಹಾನಾ ಸೈಯದ್ ಪೋಸ್ಟ್ ವೈರಲ್

ಕನ್ನಡ ಸರಿಗಮಪ ರಿಯಾಲಿಟಿ ಶೋನಲ್ಲಿ ಶ್ರೀಕರನೇ ಶ್ರೀನಿವಾಸನೇ ಎಂದು ಹಾಡಿ ಕಲಾಭಿಮಾನಿಗಳ ಮನಸ್ಸು ಕದ್ದಿದ್ದ ಮುಸ್ಲಿಂ ಯುವತಿ ಸುಹಾನಾ ಸೈಯದ್ ನಂತರ ಮುಸ್ಲಿಂ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುಹಾನಾ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ಇದೀಗ ಇವರು ಹಿಂದೂ ಯುವಕನೊಂದಿಗೆ ಮದುವೆಯಾಗಿದ್ದಾರೆ. , ಈಗ ಸುಹಾನಾ ಸೈಯದ್ ತನ್ನ ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಮಾತ್ರವಲ್ಲ, ತಾನು ಹೊತ್ತಿದ್ದ ಹರಕೆಯನ್ನೂ ತೀರಿಸಿದ್ದಾರೆ.

ಹೌದು, ಸುಹಾನಾ ಇತ್ತೀಚೆಗಷ್ಟೇ ಅವರು ತಮ್ಮ ಬಹುಕಾಲದ ಗೆಳೆಯ ನಿತಿನ್ ಶಿವಾಂಶ್ ಅವರನ್ನು ಮದುವೆಯಾಗಿದ್ದು, ಪತಿಯ ಜತೆಗೆ ಮಂತ್ರಾಲಯಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಅವರು ಮಂತ್ರಾಲಯಕ್ಕೆ ಭೇಟಿಕೊಟ್ಟ ಅನೇಕ ಫೋಟೊಗಳು ವೈರಲ್ ಆಗಿದೆ. ಈ ವೇಳೆ ಅವರು ತಮ್ಮ ಮದುವೆ ನಡೆಯಲು ರಾಯರೇ ಮುಖ್ಯ ಕಾರಣ ಎಂದು ಬರೆದುಕೊಂಡಿದ್ದಾರೆ.
“ನಾನು ಮಂತ್ರಾಲಯಕ್ಕೆ ಬಂದ ಕೂಡಲೇ ನಮ್ಮಿಬ್ಬರ ಕುಟುಂಬಗಳ ಆಶೀರ್ವಾದದೊಂದಿಗೆ ನಮ್ಮ ಮದುವೆ ನಡೆಯಲಿ ಎಂದು ಒಂದು ಪವಾಡಕ್ಕಾಗಿ ಪ್ರಾರ್ಥಿಸಿದ್ದೆ. ಅದು ಈಡೇರಿದೆ. ಒಂದು ದಿನ ನಾನು ನಿತಿನ್ ಜೊತೆ ಇಲ್ಲಿಗೆ ಹಿಂತಿರುಗುತ್ತೇನೆ ಎಂದು ಆಶಿಸುತ್ತಾ ನಾನು ಯಾವಾಗಲೂ ಕಣ್ಣಲ್ಲಿ ನೀರು ತುಂಬಿಕೊಂಡು ಹೊರಡುತ್ತಿದ್ದೆ. ಅದರಂತೆ ನಮ್ಮ ಮದುವೆ ನಡೆದಿದೆʼʼ ಎಂದು ಸುಹಾನಾ ಸೈಯದ್ ಹೇಳಿದ್ದಾರೆ.
ʼʼಅಂದು ಬೇಡಿಕೊಂಡು ಹೋದ ಬಳಿಕ ಮುಂದೊಂದು ದಿನ ಇಬ್ಬರು ಜತೆಯಾಗಿ ಬರುತ್ತೇವೆ ಎಂದು ಬಯಸಿದ್ದೆವು. ಇಲ್ಲಿಗೆ ಬಂದ ಮೇಲೆ ನಮ್ಮ ಮದುವೆ ನಡೆಯುತ್ತದೆ ಎಂಬ ಭರವಸೆ ನಮಗೆ ಮೂಡಿತು. ಇಲ್ಲಿಂದ ವಾಪಾಸಾಗುವಾಗ ಕಣ್ಣೀರು ಹಾಕಿಕೊಂಡು ಆ ದಿನ ನಾವಿಬ್ಬರು ಹೊರಟು ಬಿಟ್ಟಿದ್ದೆವು. ಇಂದು ರಾಯರ ಅನುಗ್ರಹದಿಂದ ನಾವಿಷ್ಟ ಪಟ್ಟಂತೆ ಮದುವೆಯಾಗಿದ್ದೇವೆ. ಅವರ ಆಶೀರ್ವಾದವು ಸಿಕ್ಕಿತು, ಜತೆಯಾಗಿದ್ದೇವೆ. ರಾಯರಿಗೆ ನಾನೆಂದಿಗೂ ಕೃತಜ್ಞಳಾಗಿದ್ದೇನೆʼʼ ಎಂದು ಸುಹಾನಾ ಬರೆದುಕೊಂಡಿದ್ದಾರೆ.
Comments are closed.