Actor Dileep: ನಟಿಯ ಕಿಡ್ನಾಪ್, ರೇಪ್ ಕೇಸ್ : ನಟ ದಿಲೀಪ್ ಖುಲಾಸೆ, 6 ಮಂದಿ ದೋಷಿ

Actor Dileep: ಪ್ರಮುಖ ನಟಿಯ ಅಪಹರಣ (Kidnap) ಮತ್ತು ಅತ್ಯಾಚಾರ (Rape) ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ (Actor Dileep) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.ನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ 8ನೇ ಆರೋಪಿಯಾಗಿದ್ದ ನಟ ದಿಲೀಪ್ ಅವರನ್ನು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. ನ್ಯಾಯಾಧೀಶೆ ಹನಿ ಎಂ ವರ್ಗೀಸ್ ಅವರು ಆರು ವರ್ಷಗಳ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದ ಮೊದಲ 6 ಆರೋಪಿಗಳು ದೋಷಿಗಳು ಎಂದು ಕೋರ್ಟ್ ಹೇಳಿದ್ದು ಇವರಿಗೆ ಡಿ.12 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.2017 ರಲ್ಲಿ ದಾಖಲಾದ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ಸಂಚು ರೂಪಿಸಿದ ಆರೋಪಗಳನ್ನು ಹೊರಿಸಲಾಗಿತ್ತು.
ಈ ಕೃತ್ಯದಲ್ಲಿ ನೇರವಾಗಿ ಭಾಗವಹಿಸದಿದ್ದರೂ ಘಟನೆಯ ಮುಖ್ಯ ಸೂತ್ರಧಾರ ಎಂದು ದಿಲೀಪ್ ಕುಮಾರ್ ಅವರ ಹೆಸರನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿತ್ತು.ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರು ಆರೋಪಿಗಳು ಸೇರಿದಂತೆ ಒಟ್ಟು ಹತ್ತು ಮಂದಿ ವಿಚಾರಣೆ ಎದುರಿಸಿದ್ದರು. ಸಂತ್ರಸ್ತ ನಟಿಯ ಮೇಲಿನ ವೈಯಕ್ತಿಕ ದ್ವೇಷದಿಂದ ಅತ್ಯಾಚಾರಕ್ಕೆ ಸುಪಾರಿ ನೀಡಿದ್ದರು ಎಂಬುದು ದಿಲೀಪ್ ವಿರುದ್ಧ ಆರೋಪ ಹೊರಿಸಲಾಗಿತ್ತು. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ, ತನ್ನನ್ನು ಪ್ರಕರಣದಲ್ಲಿ ಪೊಲೀಸರು ಸಿಲುಕಿಸಿದ್ದಾರೆ ಎಂದು ದಿಲೀಪ್ ವಾದಿಸಿದ್ದರು.ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 120 ಎ (ಪಿತೂರಿ), 120 ಬಿ (ಕ್ರಿಮಿನಲ್ ಪಿತೂರಿ), 109 (ಅಪರಾಧಕ್ಕೆ ಪ್ರಚೋದನೆ), 366 (ಮಹಿಳೆಯನ್ನು ಅಪಹರಿಸುವುದು), 354 (ಕೆರಳಿಸುವ ಉದ್ದೇಶದಿಂದ ಲ್ಲೆ), 354 ಬಿ (ಮಹಿಳೆಯನ್ನು ವಿವಸ್ತ್ರಗೊಳಿಸುವುದು), 376 ಡಿ (ಸಾಮೂಹಿಕ ಅತ್ಯಾಚಾರ), 201 (ಸಾಕ್ಷಿ ನಾಶ), 212 (ಅಪರಾಧಿಗೆ ಆಶ್ರಯ ನೀಡುವುದು) ಅಡಿ ಆರೋಪ ಹೊರಿಸಲಾಗಿತ್ತು.ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66E (ಒಪ್ಪಿಗೆಯಿಲ್ಲದೆ ವ್ಯಕ್ತಿಯ ಖಾಸಗಿ ಚಿತ್ರಗಳನ್ನು ಸೆರೆಹಿಡಿಯುವುದು ಅಥವಾ ರವಾನಿಸುವುದು) ಮತ್ತು 67A (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಚಿತ್ರಗಳನ್ನು ರವಾನಿಸುವುದು) ಅಡಿಯಲ್ಲೂ ಆರೋಪ ಮಾಡಲಾಗಿತ್ತು.
Comments are closed.