Ranaveer Singh: ದೈವಕ್ಕೆ ಅಪಮಾನ ಮಾಡಿದ ವಿಚಾರ – ‘ತಪ್ಪಾಯ್ತು ಕ್ಷಮಿಸಿ’ ಎಂದ ರಣವೀರ್ ಸಿಂಗ್

Ranaveer Singh: ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕಾಂತಾರದ ದೈವವನ್ನು ದೆವ್ವ ಎಂದು ಕರೆದಿದ್ದರು. ಅಲ್ಲದೆ ರಿಷಬ್ ಶೆಟ್ಟಿ ನಟನೆಯನ್ನು ಕಣ್ಣಗಲಿಸಿ ತಮಾಷೆ ಕೂಡ ಮಾಡಿದ್ದರು. ಇದು ರಾಜ್ಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ಇದೀಗ ರಣವೀರ್ ಸಿಂಗ್ ಅವರು ನನ್ನದು ತಪ್ಪಾಯಿತು ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾರೆ.

ಹೌದು, ʼಕಾಂತಾರʼ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ರಣವೀರ್ ಟೀಕೆಗೆ ಗುರಿಯಾಗಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ವ್ಯಾಪಕ ಆಗ್ರಹ ಕೇಳಿ ಬಂದಿತ್ತು. ಕರಾವಳಿಯ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ರಣವೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು. ಈ ತುಳುನಾಡಿನ ಮಣ್ಣಿಗೆ ಶರಣಾಗಬೇಕು ಎಂಬ ಕೂಗು ಕೂಡ ಕೇಳಿ ಬಂದಿತ್ತು.
ದೇಶವ್ಯಾಪಿ ತನ್ನ ವಿರುದ್ಧ ಎದ್ದ ಈ ಆಕ್ರೋಶದ ಅಲೆಯನ್ನು ಕಂಡು ಸದ್ಯ ಬೆಚ್ಚಿ ಬಿದ್ದಿರುವ ರಣವೀರ್ ಸಿಂಗ್, ತಮ್ಮ ಈ ವರ್ತನೆಗೆ ಕೊನೆಗೂ ಈಗ ಕ್ಷಮೆ ಕೇಳಿದ್ದಾರೆ. ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ ಎಂದಿದ್ದಾರೆ. ಈ ಕುರಿತಾಗಿ ಪೋಸ್ಟ್ ಹಾಕಿದ ಅವರು
‘ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ಆ ದೃಶ್ಯವನ್ನು ಮಾಡಲು ಎಷ್ಟು ಶ್ರಮ ಬೇಕು ಎಂಬುದು ನನಗೆ ತಿಳಿದಿದೆ. ಹೀಗಾಗಿ ಅವರ ಬಗ್ಗೆ ನನಗೆ ಮೆಚ್ಚುಗೆ ಇದೆ’ ಎಂದಿದ್ದಾರೆ ರಣವೀರ್ ಸಿಂಗ್.
ಮುಂದುವರೆದು ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ.. ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ ಎಂದು ಹೇಳಿರುವ ರಣವೀರ್ ಸಿಂಗ್ ನನ್ನಿಂದ ಯಾರದ್ದಾದರೂ ಭಾವನೆಗಳಿಗೆ ಧಕ್ಕೆಯುಂಟಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
Comments are closed.