Maize: ಮೆಕ್ಕೆಜೋಳಕ್ಕೆ 2400 ರೂ. ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ!!

Share the Article

Maize: ರೈತರಿಂದ ಪ್ರತಿ ಕ್ವಿಂಟಲ್‌ಗೆ 2400 ರೂ. ದರದಲ್ಲಿ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೌದು, ಮೆಕ್ಕೆಜೋಳವನ್ನು ಕಡ್ಡಾಯವಾಗಿ ಖರೀದಿ ಮಾಡುವಂತೆ ಡಿಸ್ಟಿಲರಿಗಳಿಗೆ ಆದೇಶ ಹೊರಡಿಸಿರುವ ಸರ್ಕಾರ ಡಿ.1ರಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದೆ. ಅಲ್ಲದೆ ಡಿಸ್ಟಿಲರಿಗಳು ಖರೀದಿಸುವ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್ ಗೆ 2,400 ರೂ. ನಿಗದಿ ಮಾಡಲಾಗಿದೆ.

ಕೇಂದ್ರವು ರಾಜ್ಯದ ಡಿಸ್ಟಿಲರಿಗಳು ಖರೀದಿಸಬೇಕಾಗಿರುವ ಮೆಕ್ಕೆಜೋಳದ ಬಗ್ಗೆ ಎಸ್‌ಒಪಿ ಬಿಡುಗಡೆ ಮಾಡಿದೆ. ಅದರಲ್ಲಿ NCCF ಹಾಗೂ ನಾಫೆಡ್ ಮೂಲಕ ಪ್ರತಿ ಕ್ವಿಂಟಲ್ ಗೆ 2639 ರೂ. ದರ ನಿಗದಿಯಾಗಿದೆ. ಆದರೆ ಮಾರುಕಟ್ಟೆಯಲ್ಲಿ 1600 ರಿಂದ 1,900 ರೂ. ಧಾರಣೆ ಇದೆ. ಹೀಗಾಗಿ 2639 ರೂ.ಗೆ ಖರೀದಿಸಿದರೆ ಸಮಸ್ಯೆ ಆಗುತ್ತದೆ ಎಂದು ಡಿಸ್ಟಲರಿ ಮಾಲೀಕರು ಸರ್ಕಾರಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ 2400 ರೂ.ಗೆ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಮೆಕ್ಕೆಜೋಳ ಬೆಳೆದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದರು. ಮೆಕ್ಕೆಜೋಳಕ್ಕೆ ಹೆಚ್ಚುವರಿ ಬೆಲೆ ಘೋಷಿಸಿ, ಖರೀದಿ ಮಾಡಬೇಕೆಂದು ಹೋರಾಟವನ್ನೂ ನಡೆಸಿದ್ದರು. ಈ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಸಭೆ ನಡೆಸಿದ್ದರು. ಸಭೆಯ ತೀರ್ಮಾನದಂತೆ, ಸಹಕಾರ ಇಲಾಖೆಯು ಖರೀದಿ ಪ್ರಕ್ರಿಯೆ, ನಿಗದಿತ ಡಿಸ್ಟಿಲರಿಗಳು, ಖರೀದಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಪ್ರಮಾಣಿತ ಕಾರ್ಯ ವಿಧಾನ (ಎಸ್‌ಒಪಿ) ಕುರಿತ ಆದೇಶ ಹೊರಡಿಸಿದೆ.

Comments are closed.