ಪುತ್ತೂರು: ಪುತ್ತಿಲ ಪರಿವಾರದವರಿಗೆ ಕೊಕ್, ಬಿಜೆಪಿ ಪುತ್ತಿಲ ಪರಿವಾರ ಸಂಘರ್ಷ ಪುನರಾರಂಭ!

ಪುತ್ತೂರು: ಪುತ್ತೂರು ಬಿಜೆಪಿ ಮತ್ತು ಪರಿವಾರದ ನಡುವಿನ ಮುಸುಕಿನ ಮುನಿಸು ಇದೀಗ ಜಗಜ್ಜಾಹೀರ ಆಗಿದ್ದು, ಇನ್ನೊಂದು ಹಂತಕ್ಕೆ ತಲುಪಿದೆ. ಬಿಜೆಪಿ ಗ್ರಾಮಾಂತರ, ನಗರ ಮಂಡಲ ಇತ್ಯಾದಿ ಸಮಿತಿಯಲ್ಲಿ ಸ್ಥಾನ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ಜವಾಬ್ದಾರಿ ಪಡೆದಿದ್ದ ಪುತ್ತಿಲ ಪರಿವಾರದ ಮೂವರನ್ನು ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ ಬದಲಾಯಿಸಿ ಆ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಲಾಗಿದೆ. ಸಂಘರ್ಷ ನೇರ ನೇರಾ ಆಗಿದ್ದು, ಇನ್ನು ಕೆಲವು ಪುತ್ತಿಲ ಪರಿವಾರದ ಕೆಲವರು ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದಾರೆ.

ಇದೀಗ ಹೀಗೆ ಜವಾಬ್ದಾರಿಯಿಂದ ಬಿಡುಗಡೆ ಮಾಡಿದ ಕ್ರಮಕ್ಕೆ ಬಿಜೆಪಿ ಮುಖಂಡರು ಕಾರಣ ನೀಡಿದ್ದಾರೆ. ಅವರು ಪಕ್ಷದ ಸ್ಥಾನದಲ್ಲಿ ಜವಾಬ್ದಾರಿ ಹೊಂದಿದ್ದರೂ ಯಾವುದೇ ಮೀಟಿಂಗ್ ಗೆ ಬರುತ್ತಿರಲಿಲ್ಲ. ಚಟುವಟಿಕೆಯಲ್ಲಿ ಇರದೆ ಇದ್ರೆ ಪಕ್ಷ ಸಂಘಟನೆಗೆ ತೊಂದರೆ ಆಗುತ್ತದೆ. ಹೀಗಾಗಿ ಒಟ್ಟು ನಾಲ್ವರನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಲಾಗಿದೆ ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷೇತರವಾಗಿ ಕಣಕ್ಕಿಳಿದಿದ್ದ, ಬಿಜೆಪಿ ಪಕ್ಷದಲ್ಲಿ ಟಿಕೆಟ್ ವಿಷಯದಲ್ಲಿನ ಗೊಂದಲದ ಕಾರಣ ಜನರಲ್ಲಿದ್ದ ಅಸಮಾಧಾನವನ್ನು ಅವಕಾಶಮಾಡಿಕೊಂಡಿದ್ದ ಅರುಣ್ ಕುಮಾರ್ ಪುತ್ತಿಲರವರು ಗೆಲುವಿನ ಸನಿಹಕ್ಕೆ ಸರಿದಿದ್ದರು. ಬಿಜೆಪಿ ಪಕ್ಷವು ಮೂರನೆಯ.ಸ್ಥಾನಕ್ಕೆ ತೃಪ್ತಿ ಪಟ್ಟು, ಕಾಂಗ್ರೆಸ್ಸಿನ ಅಶೋಕ್ ಕುಮಾರ್ ರೈ ವಿಜಯಿಯಾಗಿದ್ದರು. ಆದರೆ ಮಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪುತ್ತಿಲ ಪರಿವಾರ ಕಮಲ ಪಾಳಯಕ್ಕೆ ಸೇರಿದ್ದರು. ಪರಿವಾರದ ಸಕ್ರಿಯ ಹುಡುಗರಿಗೆ ಗ್ರಾಮಾಂತರ, ನಗರ ಮಂಡಲದಲ್ಲಿ ಅವಕಾಶ ದೊರೆತಿತ್ತು.
ಅವರಲ್ಲಿ ಪ್ರಮುಖರಾದವರು ಯಾರೆಂದರೆ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ಉಮೇಶ್ ಕೋಡಿ ಬೈಲು, ಪ್ರಶಾಂತ್ ನೆಕ್ಕಿಲಾಡಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಪ್ರಮುಖರು. ಈಗ ಈ ಮೂವರನ್ನು ಬದಲಾಯಿಸಿ ಗುರುವಾರ ಆದೇಶ ಹೊರಬಿದ್ದಿದೆ. ಈ ಪೈಕಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿದ್ದ ನಾಗೇಶ್ ಪೈ ಎಂಬವರು ವೈಯಕ್ತಿಕ ಕಾರಣದಿಂದ ಈ ಹಿಂದೆಯೇ ರಾಜೀನಾಮೆ ನೀಡಿ ಹಿಂದೆ ಸರಿದಿದ್ದರು.
ಅರುಣ ಕುಮಾರ್ ಪುತ್ತಿಲ ಪಕ್ಷಕ್ಕೆ ಸೇರುವ ಸಂದರ್ಭದಲ್ಲಿ ಅವರಿಗೆ ಜವಾಬ್ದಾರಿ ನೀಡುವ ಭರವಸೆ ನೀಡಲಾಗಿತ್ತು. ಆದರೆ ಪುತ್ತಿಲ ಪಕ್ಷಕ್ಕೆ ಸೇರಿ ವರ್ಷ ಕಳೆದಿದೆ. ಸಮಯ ಸರಿಯುತ್ತಲೇ ಇದೆ. ಯಾವುದೇ ಸ್ಥಾನ ಸ್ಥಾನಮಾನ ಅಧಿಕಾರ ಮರೀಚಿಕೆ ಆಗಿದೆ. ಇದನ್ನೆಲ್ಲಾ ನೋಡಿ, ಕಳೆದ 3 ತಿಂಗಳ ಹಿಂದೆ ಬೆಂಬಲಿಗರು ಸಭೆ ಸೇರಿ ಪರಿವಾರದ ಕಾರ್ಯಕರ್ತರು ಬಿಜೆಪಿಯ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ತೀರ್ಮಾನ ತೆಗೆದುಕೊಂಡಿದ್ದರು. ಈಗ ಅದೇ ಕಾರಣ ಮುಂದಿಟ್ಟು ಪುತ್ತಿಲ ಪರಿವಾರದ ಮೂವರನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಲಾಗಿದೆ.
ಪಕ್ಷದಲ್ಲಿ ಜವಾಬ್ದಾರಿ ಹೊಂದಿರುವವರು ಗೈರಾಗುತ್ತಿರುವ ಪರಿಣಾಮ ಪಕ್ಷ ಸಂಘಟನೆ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಮಂಡಲ ಸಮಿತಿಯವರು ತಿಳಿಸಿದ್ದರು. ಹಾಗಾಗಿ ಈ ಬದಲಾವಣೆ ಮಾಡಲಾಗಿದೆ. ಪಕ್ಷದಿಂದ ಯಾರನ್ನೂ ತೆಗೆದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ ಎಂದು ವರದಿಯಾಗಿದೆ.
Comments are closed.