Muruga Shri: ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಖುಲಾಸೆ ವಿಚಾರ – ಕೇಸ್ ಹಾಕಿದ್ದ ‘ಒಡನಾಡಿ ಸಂಸ್ಥೆ’ ಪ್ರತಿಕ್ರಿಯಿಸಿದ್ದು ಹೀಗೆ

Muruga Shri: ರಾಜ್ಯಾದ್ಯಂತ ಸದ್ದು ಮಾಡಿದ್ದ ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಕೇಳಿ ಬಂದಿದ್ದ ಪೋಕ್ಸೋ ಪ್ರಕರಣ ಇದೀಗ ಸುಖಾಂತ್ಯ ಕಂಡಿದ್ದು ಮುರುಘಾ ಶ್ರೀಗಳನ್ನು ಈ ಅತ್ಯಾಚಾರ ಪ್ರಕರಣದಿಂದ ಚಿತ್ರದುರ್ಗದ ನ್ಯಾಯಾಲಯ ಖುಲಾಸೆಗೊಳಿಸಿದೆ. ಇದೀಗ ನ್ಯಾಯಾಲಯ ನೀಡಿರುವ ನಿರಪರಾಧಿ ತೀರ್ಪು ಕುರಿತು ಮಕ್ಕಳ ಪರ ಹೋರಾಟ ಮಾಡುತ್ತಿರುವ ಒಡನಾಡಿ ಸಂಸ್ಥೆ ತೀವ್ರ ನಿರಾಸೆ ವ್ಯಕ್ತಪಡಿಸಿ ಈ ತೀರ್ಪು ‘ವ್ಯವಸ್ಥೆಯ ಸೋಲು’ ಎಂದು ಹೇಳಿದೆ.

ಈ ಕುರಿತಾಗಿ ಒಡನಾಡಿ ಸಂಸ್ಥಾಪಕರಾದ ಸ್ಟ್ಯಾನ್ಲಿ ಆಕ್ರೋಶ ಹೊರಹಾಕಿದ್ದು, ಈ ತೀರ್ಪು ನಿರಾಶೆ ಮೂಡಿಸಿದ್ದರೂ ಅದನ್ನು ಸ್ವಾಗತಿಸುತ್ತೇವೆ. ಆದರೆ ಮಕ್ಕಳ ಪರ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ತೀರ್ಪು ವ್ಯವಸ್ಥೆಯ ಸೋಲು. ನಮ್ಮ ವ್ಯವಸ್ಥೆಯಿಂದಲೇ ಈ ಸೋಲಾಗಿದೆ. ತನಿಖೆ ಹಂತದಲ್ಲಿ ಬಹುದೊಡ್ಡ ಲೋಪಗಳಾಗಿವೆ. ಸರ್ಕಾರ, ಪೊಲೀಸ್ ಇಲಾಖೆ, ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿ (CWC) ಸೇರಿದಂತೆ ಎಲ್ಲೆಡೆಯೂ ಲೋಪಗಳು ಆಗಿವೆ. ಅದರಿಂದಲೇ ಇಂತಹ ತೀರ್ಪು ಬಂದಿದೆ ಎಂದರು.
ಅಲ್ಲದೆ ಮಕ್ಕಳನ್ನು ಹೆದರಿಸುವ ಕೆಲಸವೂ ಸಹ ಆಗಿದೆ ಎಂದು ಗಂಭೀರ ಆರೋಪ ಮಾಡಿದರು. ಇಲ್ಲಿ ಜಾತಿ, ಹಣ, ಧರ್ಮ ಎಲ್ಲವೂ ಕೆಲಸ ಮಾಡಿವೆ. ಆದರೆ, ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ. ನಾನು ಸದಾ ಮಕ್ಕಳ ಪರ ಇರುತ್ತೇನೆ ಎಂದು ಸ್ಟ್ಯಾನ್ಲಿ ಅವರು ತಮ್ಮ ಹೋರಾಟದ ದೃಢತೆಯನ್ನು ಪುನರುಚ್ಚರಿಸಿದರು.
ಇಷ್ಟು ಮಾತ್ರವಲ್ಲದೆ ಮುಂದಿನ ಹೋರಾಟದ ಕುರಿತು ಮಾತನಾಡಿದ ಅವರು, ‘ನಾವು ಮಕ್ಕಳ ಅಭಿಪ್ರಾಯ ಪಡೆದು ಮುಂದಿನ ಕಾನೂನು ಹೋರಾಟ ಮಾಡುತ್ತೇವೆ. ಕಾನೂನು ಮಾರ್ಗದಲ್ಲಿ ನ್ಯಾಯ ಒದಗಿಸಲು ನಮ್ಮ ಪ್ರಯತ್ನ ಮುಂದುವರಿಯುತ್ತದೆ. ಈ ತೀರ್ಪಿನಿಂದಾಗಿ ಮಕ್ಕಳ ಪರ ಹೋರಾಟಗಾರರಿಗೆ ಹಿನ್ನಡೆಯಾಗಿದ್ದರೂ, ಮುರುಘಾ ಶ್ರೀ ಪ್ರಕರಣದ ಕಾನೂನು ಸಮರ ಇನ್ನೂ ಮುಗಿದಿಲ್ಲ ಎಂಬುದನ್ನು ಒಡನಾಡಿ ಸಂಸ್ಥೆ ಸ್ಪಷ್ಟಪಡಿಸಿದೆ.
Comments are closed.