ಉಡುಪಿಗೆ ಮೋದಿ ಭೇಟಿ ವಿಷಯ: ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಿಸುವಂತೆ ಮನವಿ

ಉಡುಪಿ: ಉಡುಪಿಯ ಶ್ರೀ ಕೃಷ್ಣಮಠದಲ್ಲಿ ನವೆಂಬರ್ 28 ರಂದು ʼಲಕ್ಷಕಂಠ ಗೀತಾ ಪಾರಾಯಣʼ ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿದ್ದು, ಆ ದಿನದಂದು ಜಿಲ್ಲೆಗೆ ಸಾರ್ವತ್ರಿಕ ಸ್ಥಳೀಯ ರಜೆ ಘೋಷಣೆ ಮಾಡುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಪತ್ರದ ಮೂಲಕ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಪತ್ರದಲ್ಲೇನಿದೆ?
ನವೆಂಬರ್ 28ರ ಶುಕ್ರವಾರದಂದು ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿರವರು ಉಡುಪಿಯ ಶ್ರೀ ಕೃಷ್ಣ ಮಠ ಮತ್ತು ಪರ್ಯಾಯ ಪುತ್ತಿಗೆ ಮಠಗಳ ಆಶ್ರಯದಲ್ಲಿ ನಡೆಯುವ ಲಕ್ಷ ಕಂಠ ಗೀತಾ ಗಾಯನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ತಮಗೆ ತಿಳಿದ ವಿಚಾರವಾಗಿದೆ.
ದೇಶದ ಪ್ರಧಾನಿಯೋರ್ವರು ಸರಿಸುಮಾರು ಮೂರು ದಶಕಗಳ ಬಳಿಕ (ಚುನಾವಣಾ ಪ್ರಚಾರವನ್ನು ಹೊರತುಪಡಿಸಿ) ಉಡುಪಿಗೆ ಭೇಟಿ ನೀಡುತ್ತಿರುವುದು ಜಿಲ್ಲೆಗೆ ಸಂಭ್ರಮದ ವಿಚಾರವಾಗಿದೆ. ಸದರಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನತೆ ಭಾಗಿಯಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ಪ್ರಧಾನಮಂತ್ರಿಗಳ ಭೇಟಿ ಸಮಯದ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ವಾಹನಗಳ ಸಂಚಾರ ಮತ್ತು ಸಾರ್ವಜನಿಕ ಓಡಾಟದ ನಿರ್ಬಂಧವಿರುವುದರಿಂದ 28ರ ಶುಕ್ರವಾರದಂದು ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಅಂಗನವಾಡಿ, ಶಾಲಾ-ಕಾಲೇಜು ಹಾಗೂ ಸರಕಾರಿ ಕಛೇರಿಗಳು ಸೇರಿದಂತೆ ಜಿಲ್ಲಾದ್ಯಂತ ಒಂದು ದಿನದ ಸಾರ್ವತ್ರಿಕ ಸ್ಥಳೀಯ ರಜೆ ಘೋಷಿಸುವಂತೆ ಕೋರಿದ್ದಾರೆ.
Comments are closed.