PF-EPF ನಿಯಮಗಳಲ್ಲಿ ಭಾರೀ ಬದಲಾವಣೆ – ಕಂಪನಿಗಳಿಗೆ ಸರ್ಕಾರ ಖಡಕ್ ಎಚ್ಚರಿಕೆ

PF-EPF: ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವ ಮತ್ತು ಅವರಿಗೆ ಆರ್ಥಿಕ ಹಾಗೂ ಆರೋಗ್ಯ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ದಶಕಗಳಷ್ಟು ಹಳೆಯದಾದ ಕಾರ್ಮಿಕ ಕಾನೂನುಗಳನ್ನು ಬದಿಗಿರಿಸಿ, ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಉದ್ಯೋಗಿಗಳಿಗೆ ಬಂಪರ್ ಕೊಡುಗೆಯನ್ನು ನೀಡಿದೆ.

ಹೌದು, ಸುಮಾರು 29 ಹಳೆಯ ಕಾರ್ಮಿಕ ಕಾಯ್ದೆಗಳನ್ನು ಒಗ್ಗೂಡಿಸಿ, ಉದ್ಯೋಗಿಗಳ ಹಕ್ಕುಗಳನ್ನು ಬಲಪಡಿಸುವ ಉದ್ದೇಶದಿಂದ ಈ ಸಂಹಿತೆಗಳನ್ನು ರೂಪಿಸಲಾಗಿದೆ.ವಿಶೇಷವಾಗಿ ಪ್ರಾವಿಡೆಂಟ್ ಫಂಡ್ (PF) ಮತ್ತು ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC) ಸೌಲಭ್ಯಗಳನ್ನು ಎಲ್ಲಾ ವರ್ಗದ ಕಾರ್ಮಿಕರಿಗೂ ವಿಸ್ತರಿಸುವ ಮೂಲಕ ಸರ್ಕಾರ ಕಾರ್ಮಿಕರ ಆರ್ಥಿಕ ಮತ್ತು ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿದೆ.
ಹೊಸ ನಿಯಮಗಳ ಪ್ರಕಾರ, ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಉದ್ಯೋಗಿಗೆ ಪ್ರಾವಿಡೆಂಟ್ ಫಂಡ್ ಸೌಲಭ್ಯ ಕಡ್ಡಾಯವಾಗಿದೆ. ಪೂರ್ಣ ಸಮಯದ ಉದ್ಯೋಗಿಗಳು, ಗುತ್ತಿಗೆ ಕಾರ್ಮಿಕರು, ತಾತ್ಕಾಲಿಕ ಕೆಲಸಗಾರರಿಗೆ ಸೇರಿದಂತೆ ಎಲ್ಲರಿಗೂ PF ಅನ್ವಯವಾಗಲಿದೆ. ಇದುವರೆಗೆ ಅನೇಕ ಕಂಪನಿಗಳು ತಮ್ಮ ಕಾರ್ಮಿಕರಿಗೆ PF ಸೌಲಭ್ಯ ನೀಡದೇ ತಪ್ಪಿಸಿಕೊಳ್ಳುತ್ತಿದ್ದವು. ಈಗ ಅಂತಹ ಯಾವುದೇ ಅವಕಾಶವಿರುವುದಿಲ್ಲ. ಎಲ್ಲಾ ಸಂಸ್ಥೆಗಳು ತಮ್ಮ ಎಲ್ಲಾ ಕಾರ್ಮಿಕರನ್ನು PF ಯೋಜನೆಯಡಿ ನೋಂದಾಯಿಸಿ, ಕಾನೂನುಬದ್ಧ ಕೊಡುಗೆ ನೀಡಲೇಬೇಕು.
ಕಾರ್ಮಿಕರ ಆರೋಗ್ಯ ರಕ್ಷಣೆಗೆ ಸರ್ಕಾರ ವಿಶೇಷ ಒತ್ತು ನೀಡಿದೆ. ಹಿಂದೆ ಕಡಿಮೆ ಸಂಬಳ ಪಡೆಯುವವರಿಗೆ ಮಾತ್ರ ಸೀಮಿತವಾಗಿದ್ದ ಇಎಸ್‌ಐಸಿ ಸೌಲಭ್ಯವು ಈಗ ಎಲ್ಲರಿಗೂ ಮುಕ್ತವಾಗಿದೆ.
ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳಿಗೂ ಇಎಸ್‌ಐಸಿ ಸೌಲಭ್ಯವನ್ನು ವಿಸ್ತರಿಸಲಾಗಿದೆ. 10ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಣ್ಣಪುಟ್ಟ ಅಂಗಡಿಗಳು ಅಥವಾ ಸಂಸ್ಥೆಗಳು ಸಹ ಸ್ವಯಂಪ್ರೇರಣೆಯಿಂದ ಇಎಸ್‌ಐಸಿ ಯೋಜನೆಗೆ ಸೇರ್ಪಡೆಗೊಳ್ಳಬಹುದು. ಇದರಿಂದಾಗಿ ದೇಶದ ಕೋಟ್ಯಂತರ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಅನಾರೋಗ್ಯದ ರಜೆ ಭತ್ಯೆ ಮತ್ತು ಅಪಘಾತ ಪರಿಹಾರದಂತಹ ಸೌಲಭ್ಯಗಳು ಸುಲಭವಾಗಿ ದೊರೆಯಲಿವೆ.
ಪ್ರಮುಖ ಬದಲಾವಣೆಗಳು:
- ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳಿಗೂ ಈಗ ESIC ಸೌಲಭ್ಯ ಲಭ್ಯ.
- 10ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಣ್ಣ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ESIC ಯೋಜನೆಗೆ ಸೇರ್ಪಡೆಗೊಳ್ಳಬಹುದು.
- ಅಪಾಯಕಾರಿ ಕ್ಷೇತ್ರಗಳಲ್ಲಿ (ಗಣಿಗಾರಿಕೆ, ತೋಟಗಳು, ಬೀಡಿ ಉದ್ಯಮ, ಡಾಕ್ ಕಾರ್ಮಿಕರು, ಗ್ರಾಮೀಣ ಕಾರ್ಮಿಕರು ಇತ್ಯಾದಿ) ಕೆಲಸ ಮಾಡುವ ಎಲ್ಲರಿಗೂ ESIC ಕಡ್ಡಾಯ.
- ಗುತ್ತಿಗೆ ಕಾರ್ಮಿಕರಿಗೆ ಸಹ ESIC ವ್ಯಾಪ್ತಿ ಕಡ್ಡಾಯಗೊಳಿಸಲಾಗಿದೆ.
- ವೈದ್ಯಕೀಯ ಸೌಲಭ್ಯ, ಅನಾರೋಗ್ಯ ಭತ್ಯೆ, ಗಾಯಕ್ಕೆ ಸಂಬಂಧಿಸಿದ ಪರಿಹಾರ – ಎಲ್ಲವೂ ಈಗ ಹೆಚ್ಚು ವ್ಯಾಪಕವಾಗಿ ಲಭ್ಯ.
ಸರ್ಕಾರದ ಈ ನಿರ್ಧಾರವನ್ನು ಕಾರ್ಮಿಕ ಸಂಘಟನೆಗಳು ಮತ್ತು ಹಕ್ಕುಗಳ ಹೋರಾಟಗಾರರು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ. ಇದು ಶೋಷಣೆಯನ್ನು ತಡೆದು ಕಾರ್ಮಿಕರಿಗೆ ನ್ಯಾಯ ಒದಗಿಸುವ ನಡೆ ಎಂದು ಬಣ್ಣಿಸಿದ್ದಾರೆ. ಇನ್ನೊಂದೆಡೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (MSME) ಮಾಲೀಕರು, ಈ ಹೊಸ ನಿಯಮಗಳಿಂದ ಆರ್ಥಿಕ ಹೊರೆ ಹೆಚ್ಚಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
Comments are closed.