ದಕ್ಷಿಣ ಕನ್ನಡ ಭಾರೀ ಮಳೆ, ಒಣಗಲು ಹಾಕಿದ್ದ ಅಡಿಕೆ ಒದ್ದೆ, ತಿರುಗಿ ವಾಪಸ್ ಹೋದ ವಿಮಾನಗಳು

ಮಂಗಳೂರು: ದ.ಕ. ಜಿಲ್ಲೆಯ ವಿವಿಧೆಡೆ, ನಿನ್ನೆ ಶನಿವಾರ ರಾತ್ರಿ ಭಾರೀ ಪ್ರಮಾಣದ ಸಿಡಿಲು ಮಳೆ ಸುರಿದಿದೆ. ಮಂಗಳೂರಿನಲ್ಲಿ ಸಿಡಿಲಿನ ಅಬ್ಬರ ಜೋರಾಗಿದ್ದು ಮಂಗಳೂರು ನಗರ ಬೆಚ್ಚಿ ಬಿದ್ದಿತ್ತು. ರಾತ್ರಿ ಸುಮಾರು ಹೊತ್ತಿನ ತನಕ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಅಲ್ಲದೆ ಬಜಪೆ ವಿಮಾನ ನಿಲ್ದಾಣ ಪರಿಸರದಲ್ಲೂ ಕೂಡಾ ಭಾರೀ ಪ್ರಮಾಣದ ಮಳೆ ಸುರಿದಿದ್ದು, ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ ಕಂಡು ಬಂದಿದೆ.

ರಾತ್ರಿ 10ರ ಸುಮಾರಿಗೆ ಮಂಗಳೂರು ನಗರ ಮತ್ತು ಸುತ್ತಮುತ್ತ ಭಾರೀ ಗುಡುಗಿನ ಅಬ್ಬರದೊಂದಿಗೆ ಜೋರು ಮಳೆ ಸುರಿಯಿತು. ಈ ಕಾರಣದಿಂದ ಮುಂಬಯಿ ಮತ್ತು ಬೆಂಗಳೂರಿನಿಂದ ಬಜಪೆಗೆ ಬಂದ ವಿಮಾನಗಳು ಇಲ್ಲಿ ಇಳಿಯಲು ಸುರಕ್ಷತಾ ಅನುಮತಿ ಸಿಗದ ಹಿನ್ನೆಲೆಯಲ್ಲಿ ವಾಪಸ್ ಬೆಂಗಳೂರಿಗೆ ತೆರಳಬೇಕಾಯಿತು. ದುಬೈಯಿಂದ ಬಂದ ವಿಮಾನ ಕಣ್ಣೂರಿಗೆ ತೆರಳಿ ಅಲ್ಲಿಯೇ ಇಳಿಯಿತು.
ಇನ್ನು ದ.ಕ. ಜಿಲ್ಲೆಯ ಬಹುತೇಕ ಎಲ್ಲ ಕಡೆ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ, ಸುಳ್ಯ, ಕಡಬ, ವಿಟ್ಲ, ಪುತ್ತೂರು, ಬಂಟ್ವಾಳ, ಮೂಲ್ಕಿ ಸುತ್ತಮುತ್ತ ರಾತ್ರಿ ಗುಡುಗು, ಸಿಡಿಲಿನೊಂದಿಗೆ ಭಾರೀ ಮಳೆಯಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನವರ ಅಂಗಳದಲ್ಲಿ ಒಣಗಲು ಹರವಿದ್ದ ಅಡಿಕೆ ಒದ್ದೆಯಾಗಿದೆ. ಉಡುಪಿ ಜಿಲ್ಲೆಯಲ್ಲೂ ರಾತ್ರಿ ಅಲ್ಲಲ್ಲಿ ಮಳೆಯಾಗಿದೆ. ಕಾಸರಗೋಡಿನ ಆಸುಪಾಸು ಸಾಧಾರಣ ಮಳೆಯಾಗಿದೆ.
ಉಳಿದಂತೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರಾಜ್ಯದಲ್ಲಿಯೇ ಅಧಿಕ ಪ್ರಮಾಣದ, ಅಂದರೆ ಐದು ಸೆಂಟಿಮೀಟರ್ ನಷ್ಟು ಮಳೆ ಸುರಿದಿದೆ.
Comments are closed.