ದಿನಕ್ಕೆ 1000 ಕಿ.ಮೀ. ಕ್ರಮಿಸಿ ಬೆಚ್ಚಿ ಬೀಳಿಸಿದ ಗಿಡುಗ!

ಇಂಫಾಲ: ದಿನಕ್ಕೆ 1000 ಕಿ.ಮೀ. ಹಾರಿ ಅಚ್ಚರಿ ಮೂಡಿಸಿದೆ ಈ ಗಿಡುಗ. ಸೈಬೀರಿಯಾದಿಂದ ಪ್ರಾರಂಭಿಸಿ ಭಾರತದ ನೆತ್ತಿಯ ಮೇಲೆ ಹಾರಾಟ ನಡೆಸಿ ನಂತರ ದಕ್ಷಿಣ ಆಫ್ರಿಕಾಗೆ ವಲಸೆ ಹೋಗುವ ಅಮುರ್ ಗಿಡುಗವು ದಿನವೊಂದಕ್ಕೆ 1,000 ಕಿ.ಮೀ. ದೂರವನ್ನು ನಿರಂತರವಾಗಿ ಕ್ರಮಿಸುತ್ತದೆ ಎಂದು ಸಂಶೋಧಕರು ಪತ್ತೆಮಾಡಿದ್ದಾರೆ.
ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು 3 ಗಿಡುಗಗಳಿಗೆ ಜಿಪಿಎಸ್ ಅಳವಡಿಸಿ, ಈ ಗಿಡುಗದ ವಲಸೆ ಪ್ರಕ್ರಿಯೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಮಣಿಪುರದಿಂದ ವಲಸೆ ಪ್ರಾರಂಭಿಸಿದ 3 ಗಿಡುಗಗಳಿಗೆ ನ.11 ರಂದು ಜಿಪಿಎಸ್ ಟ್ಯಾಗ್ ಅಳವಡಿಸಿದ್ದಾರೆ.
ಮೂರು ಬಿಡುಗಡೆಗಳ ಪೈಕಿ, 1 ಗಿಡುಗ ಆಸಾಮಾನ್ಯ ಹಾರಾಟ ಸಾಧನೆ ಪ್ರದರ್ಶಿಸಿದ್ದು, ಅದು ಕೇವಲ 76 ಗಂಟೆಗಳಲ್ಲಿ 3,100 ಕಿ.ಮೀ.ಗಳಷ್ಟು ದೂರ ಕ್ರಮಿಸಿ, ಹಾರಾಟ ಮುಂದುವರಿಸುತ್ತಿದೆ. ಇದೀಗ ಅದು ಅರಬಿ ಸಮುದ್ರದ ನೀಲ ಆಕಾಶದ ಮೇಲೆ ಹಾರುತ್ತಿದೆ. ಈ ಮೂಲಕ, ವೇಗವಾಗಿ ವಲಸೆ ಹೋಗುವ ಪ್ಯಾರಾಗ್ರೈನ್ ಫಾಲ್ಕನ್, ಬಾರ್ ಟೈಲ್ಡ ಗೋಲ್ಡ್ ವಿಟ್ ಮುಂತಾದ ಪಕ್ಷಿಗಳ ಸಾಲಿಗೆ ಆಮುರ್ ಗಿಡುಗವೂ ಸೇರಿದೆ.
ಈ ಗಿಡುಗಗಳು, ನಿರಂತರವಾಗಿ 6,000 ಕಿಲೋ ಮೀಟರ್ ರೆಕ್ಕೆ ಬಡಿದು ಭಾರತ ಮೂಲಕ ಆಫ್ರಿಕಾದ ಸೋಮಾಲಿಯಾವನ್ನು ತಲುಪುವ ಬಳಿಕ ದಕ್ಷಿಣ ಆಫ್ರಿಕಾದೆಡೆಗೆ ಚಲಿಸುತ್ತವೆ. ಅಲ್ಲಿ ಚಳಿಗಾಲವನ್ನು ಆನಂದಿಸಿ, ಚಳಿಗಾಲ ಮುಗಿದ ಬಳಿಕ ಸೈಬೀರಿಯಾದೆಡೆಗೆ ಮತ್ತೊಮ್ಮೆ ಆಕಾಶ ಪ್ರಯಾಣದ ಮೂಲಕ ಮರಳುತ್ತವೆ.

Comments are closed.