Bangalore: ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ಜಾಲ: ತಮಿಳುನಾಡಿನಲ್ಲಿ ಕಲಬೆರಕೆ, ಕರ್ನಾಟಕದಲ್ಲಿ ಮಾರಾಟ!

Bangalore: ನಂದಿನಿ ಬ್ರಾಂಡ್ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ನಡೆಸುತ್ತಿದ್ದ ಬೃಹತ್ ಜಾಲವೊಂದನ್ನು ಸಿಸಿಬಿ ಹಾಗೂ ಕೆಎಂಎಫ್ ಜಾಗೃತ ದಳ ಜಂಟಿಯಾಗಿ ಭೇದಿಸಿದೆ. ತಮಿಳುನಾಡಿನಲ್ಲಿ ತುಪ್ಪಕ್ಕೆ ಕಲಬೆರಕೆ ಮಾಡಿ, ಮತ್ತೆ ಕರ್ನಾಟಕಕ್ಕೆ ತಂದು ಮೂಲ ಉತ್ಪನ್ನದಂತೆ ಮಾರಾಟ ಮಾಡುತ್ತಿದ್ದ ನಾಲ್ವರು ಮುಖ್ಯ ಆರೋಪಿ ಅರೆಸ್ಟ್ ಆಗಿದ್ದಾರೆ. ಮಹೇಂದ್ರ, ದೀಪಕ್, ಮುನಿರಾಜು ಮತ್ತು ಅಭಿ ಅರಸು ಬಂಧಿತರು. ಒಟ್ಟು ₹1.26 ಕೋಟಿಯ ಮೌಲ್ಯದ ವಸ್ತುಗಳನ್ನು ಸಿಸಿಬಿ ವಶಪಡಿಸಿಕೊಂಡಿದೆ. ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ ಬೆಂಗಳೂರಿನಿಂದ ಶುದ್ಧ ನಂದಿನಿ ತುಪ್ಪ ಖರೀದಿಸಿ ತಮಿಳುನಾಡಿನ ತಿರುಪೂರಿಗೆ ಕಳುಹಿಸುತ್ತಿದ್ದ. ಅಲ್ಲಿ ಒಂದು ಲೀಟರ್ ಶುದ್ಧ ತುಪ್ಪಕ್ಕೆ ನಾಲ್ಕು ಲೀಟರ್ ನಕಲಿ ತುಪ್ಪ ಬೆರೆಸುತ್ತಿದ್ದರು. ನಕಲಿ ತುಪ್ಪವನ್ನು ಪಾಮ್ ಆಯಿಲ್, ತೆಂಗಿನ ಎಣ್ಣೆ ಹಾಗೂ ಡಾಲ್ದಾ ಬೆರೆಸಿ ತಯಾರಿಸಲಾಗುತ್ತಿತ್ತು. ಈ ಮಿಶ್ರಿತ ತುಪ್ಪವನ್ನು ಮತ್ತೆ ಬೆಂಗಳೂರಿಗೆ ತರಲಾಗುತ್ತಿತ್ತು ಮತ್ತು ಮಾರುಕಟ್ಟೆಯಲ್ಲಿ ನಂದಿನಿಯ ಮೂಲ ಉತ್ಪನ್ನವೆಂದು ಮಾರಾಟ ಮಾಡಲಾಗುತ್ತಿತ್ತು. ಚಾಮರಾಜಪೇಟೆ ನಂಜಾಂಬ ಅಗ್ರಹಾರದ ಕೃಷ್ಣ ಎಂಟರ್ಪ್ರೈಸಸ್ ಗೋಡೌನ್ ಹಾಗೂ ಅಂಗಡಿಗಳ ಮೇಲೆ ನಡೆದ ದಾಳಿಯಲ್ಲಿ 8,136 ಲೀಟರ್ ನಕಲಿ ತುಪ್ಪ, ನಾಲ್ಕು ವಾಹನಗಳು, ಮಿಶ್ರಣ ಯಂತ್ರಗಳು, ತೆಂಗಿನೆಣ್ಣೆ ಮತ್ತು ಫಾಮ್ ಆಯಿಲ್ ಸೇರಿ ₹1 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, “ಕೆಎಂಎಫ್ ಜಾಗೃತ ದಳ ನೀಡಿದ ಮಾಹಿತಿಯ ಆಧಾರದಲ್ಲಿ ಜಂಟಿ ಪರಿಶೀಲನೆ ನಡೆಸಿ ಜಾಲವನ್ನು ಪತ್ತೆ ಮಾಡಿದ್ದೇವೆ. ತಿರುಪೂರಿನ ಮಷಿನ್ ಯೂನಿಟ್ ಮೇಲೂ ದಾಳಿ ನಡೆದಿದೆ. 2018ರಲ್ಲಿಯೇ ಇದೇ ರೀತಿಯ ಕೃತ್ಯ ನಡೆದಿರುವ ಸುಳಿವು ಸಿಕ್ಕಿದೆ. ಕಳೆದ ಎರಡು ವರ್ಷಗಳಿಂದ ಆರೋಪಿಗಳು ನಕಲಿ ಉತ್ಪನ್ನ ತಯಾರಿಕೆ ಮಾಡುತ್ತಿದ್ದರೆಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ,” ಎಂದು ಹೇಳಿದರು.

Comments are closed.