Supreme Court : ಮೇಕೆ ದಾಟು ವಿವಾದ- ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ಜಯ, ತಮಿಳುನಾಡು ಅರ್ಜಿ ವಜಾ!!

Share the Article

Supreme Court : ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮನಾಂತರ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಗುರುವಾರ ವಜಾಗೊಳಿಸಿದೆ.

ಹೌದು ಕಳೆದ 7 ವರ್ಷಗಳಿಂದ ತಮಿಳುನಾಡು ಮೆಕೇದಾಟು ಯೋಜನೆಗೆ ಅಡ್ಡಗಾಲು ಹಾಕಿತ್ತು. ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಅರ್ಜಿ ಸಲ್ಲಿಸಿ ಅಡ್ಡಗಾಲು ಹಾಕಿತ್ತು. ಇದೀಗ ತಮಿಳುನಾಡು ಸಲ್ಲಿಸಿದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಜಯ ದೊರೆತಿದೆ. ಇದರಲ್ಲಿ ಮಧ್ಯ ಪ್ರವೇಶ ಮಾಡಲ್ಲ ಅಂತ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ತಿಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್‌ ಚಂದ್ರನ್‌ ಹಾಗೂ ಎನ್‌.ವಿ. ಅಂಜಾರಿಯಾ ಪೀಠವು, ‘ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಮಾತ್ರ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಅನುಮತಿ ನೀಡಿದೆ. ತಮಿಳುನಾಡಿನ ಆಕ್ಷೇಪಣೆಗಳನ್ನು ತಜ್ಞರು ಪರಿಶೀಲಿಸಿದ ಬಳಿಕವೇ ಈ ಪ್ರಕ್ರಿಯೆ ನಡೆದಿದೆ. ಈ ಹಂತದಲ್ಲಿ ಇದನ್ನು ಪ್ರಶ್ನಿಸಿ ತಮಿಳುನಾಡು ಅರ್ಜಿ ಸಲ್ಲಿಸಿರುವುದು ಅವಧಿಪೂರ್ವ (ಪ್ರಿಮೆಚೂರ್‌)’ ಎಂದು ಅಭಿಪ್ರಾಯಪಟ್ಟಿದೆ.

ತಮಿಳುನಾಡಿನ ವಾದವೇನು?:
ಇದಕ್ಕೂ ಮೊದಲು, ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ಕಾವೇರಿ ಅವಲಂಬಿತ ರೈತರಿಗೆ ಅನ್ಯಾಯವಾಗಲಿದೆ. ಬಿಳಿಗುಂಡ್ಲು ಮಾಪನ ಕೇಂದ್ರಕ್ಕಿಂತ ಎತ್ತರದ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸುತ್ತಿರುವುದರಿಂದ ಕೆಳಹರಿವಿನ ರಾಜ್ಯಕ್ಕೆ ನೀರಿನ ಹರಿವಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದ ವಾದವೇನು?:
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್, ತಮಿಳುನಾಡಿನ ಅರ್ಜಿ ತಪ್ಪುಕಲ್ಪನೆಯಿಂದ ಕೂಡಿದೆ. ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರು ಹರಿಸಲು ಕರ್ನಾಟಕ ಬದ್ಧವಾಗಿದೆ. ಈ ಜವಾಬ್ದಾರಿಯನ್ನು ಪೂರೈಸುತ್ತಲೇ, ಅಗತ್ಯ ಅನುಮತಿಗಳನ್ನು ಪಡೆದು ಜಲಾಶಯ ನಿರ್ಮಿಸಲು ನಮಗೆ ಹಕ್ಕಿದೆ ಎಂದು ಪ್ರತಿಪಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕರ್ನಾಟಕದ ವಾದ ಪುರಸ್ಕರಿಸಿ, ಅರ್ಜಿಯನ್ನು ವಜಾಗೊಳಿಸಿತು.

Comments are closed.