ರಂಗಭೂಮಿಯ ಬೆಳಕಿನಲ್ಲಿ ಪ್ರಜ್ವಲಿಸುತ್ತಿರುವ ರಂಗಕೇಸರಿ ಚಲನಚಿತ್ರ ನಟ ರಮೇಶ್ ರೈ ಕುಕ್ಕುವಳ್ಳಿ

Share the Article

ಕಲೆಯೇ ಜೀವ, ರಂಗವೇ ಪ್ರಾಣ ಎನ್ನುವ ಭಾವದೊಂದಿಗೆ ಜೀವಿಸಿದ ನಿಷ್ಠಾವಂತ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ ಅವರು 1975ರ ಜೂನ್ 3ರಂದು ಪುತ್ತೂರು ತಾಲ್ಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಕುಕ್ಕುವಳ್ಳಿ ಮನೆತನದಲ್ಲಿ ಜನಿಸಿದರು.
ತಂದೆ ದಿ. ಕಲ್ಲಡ್ಕ ಕರಿಯಪ್ಪ ರೈ ಮತ್ತು ತಾಯಿ ದಿ. ಗಿರಿಜಾ ಕೆ. ರೈ ಕುಕ್ಕುವಳ್ಳಿ ದಂಪತಿಯ ಪುತ್ರನಾಗಿರುವ ಇವರು ಐವರು ಅಣ್ಣಂದಿರು, ಇಬ್ಬರು ಅಕ್ಕಂದಿರಲ್ಲಿ ಕೊನೆಯ ಮಗ. ಕೃಷಿಕ ಕುಟುಂಬದ ಸಾನಿಧ್ಯದಲ್ಲಿ ಬೆಳೆದ ಇವರು ಶ್ರಮ, ನಿಷ್ಠೆ, ಮತ್ತು ಕಲೆಗಾಗಿ ತೀವ್ರ ಆಸಕ್ತಿಯ ಸಂಕೇತ.

ತಮ್ಮ ಕೇವಲ 16ನೇ ವಯಸ್ಸಿನಲ್ಲಿ ದಿ. ಶಾಂತಾರಾಮ್ ಕಲ್ಲಡ್ಕ ಅವರ “ಶೀಲಾವತಿ” ನಾಟಕದ ಮೂಲಕ ಖಳನಾಯಕನಾಗಿ ರಂಗ ಪ್ರವೇಶ ಮಾಡಿದ ಕ್ಷಣದಿಂದಲೇ ಇವರ ಜೀವನವೇ ರಂಗಭೂಮಿಯೊಂದಿಗೆ ಬೆರೆತಾಗಿದೆ. ಕಳೆದ 35 ವರ್ಷಗಳಿಂದ ರಂಗಭೂಮಿಯ ಸೇವೆಯಲ್ಲಿ ನಿರತರಾಗಿರುವ ಅವರು ನಾಯಕ, ಖಳನಾಯಕ, ಪೋಷಕ, ಹಾಸ್ಯ — ಎಲ್ಲ ಪಾತ್ರಗಳಲ್ಲಿಯೂ ತನ್ನದೇ ಛಾಪು ಮೂಡಿಸಿದ್ದಾರೆ.
ಸುಮಾರು 2800ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ 6000ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗವಹಿಸಿರುವ ಈ ಸಾಧನೆ, ಅವರ ನಿಷ್ಠೆ ಮತ್ತು ಶ್ರಮದ ನಿಜವಾದ ಸಾಕ್ಷಿ.

ಸಾಮಾಜಿಕ, ಹಾಸ್ಯ, ಪೌರಾಣಿಕ, ಜಾನಪದ ಮತ್ತು ಐತಿಹಾಸಿಕ ನಾಟಕಗಳಲ್ಲಿ ತಮ್ಮ ಕಲೆಯ ಮೆರಗು ತೋರಿದ ಅವರು, ಯಕ್ಷಗಾನ ಕ್ಷೇತ್ರದಲ್ಲಿಯೂ ವಿಶಿಷ್ಟ ಅನುಭವ ಹೊಂದಿದ್ದಾರೆ.
ರಂಗಭೂಮಿಯ ಮೇಲಿನ ಅಪಾರ ಸೇವೆಗೆ ಗುರುತಾಗಿ “ರಂಗ ಕೇಸರಿ”, “ತುಳುನಾಡ ಚಾಣಕ್ಯ”, “ರಂಗದ ರಾಜ”, “ರಂಗ ವಿಚಕ್ಷಣ”, “ಅಭಿನವ ವಜ್ರಮುನಿ”, “ಕಲಾ ಮಂದಾರ” ಮುಂತಾದ ಗೌರವ ಬಿರುದುಗಳನ್ನು ಪಡೆದಿದ್ದಾರೆ.

ಅವರು ಹಲವು ಸ್ಪರ್ಧಾ ನಾಟಕಗಳಿಗೆ ತೀರ್ಪುಗಾರರಾಗಿದ್ದು, ಶಾರದಾ ಆರ್ಟ್ಸ್, ರಂಗ ತರಂಗ, ಮಸ್ಕಿರಿ ಕುಡ್ಲ, ಕಲಾಸಂಗಮ, ನಿಸರ್ಗ ಕುಡ್ಲ, ಗಡಿನಾಡ ಕಲಾವಿದೆರ್, ವಿಧಾತ್ರಿ, ಸಾಯಿ ಶಕ್ತಿ ಮುಂತಾದ ತಂಡಗಳಲ್ಲಿ ತಮ್ಮ ಕಲೆಯ ಕಣ್ಮಣಿಗಳನ್ನು ಬೀರಿದ್ದಾರೆ.

2007ರಲ್ಲಿ “ಬದಿ” ತುಳು ಸಿನಿಮಾದ ಮೂಲಕ ಸಿನಿರಂಗ ಪ್ರವೇಶ ಮಾಡಿದ ಅವರು, ಇಂದಿಗೆ 41 ತುಳು ಮತ್ತು 22 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ “ವಿಕ್ರಾಂತ್ ರೋಣ” ಬಹುಭಾಷಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇವರ ಕಲಾ ಪಯಣದ ಮತ್ತೊಂದು ಉನ್ನತ ಕ್ಷಣವಾಗಿದೆ.
ಇದೇ ವೇಳೆ ದಿಗಿಲ್, ಲವ್ ಟು ಲಸ್ಸಿ, ಸತ್ಯ S/O ಹರಿಶ್ಚಂದ್ರ, ಲಕ್ಕಿ ಬಾಬು, ನಂಬರ್ ಪ್ಲೇಟ್ ಮುಂತಾದ ಸಿನಿಮಾಗಳು ಬಿಡುಗಡೆಯ ನಿರೀಕ್ಷೆಯಲ್ಲಿವೆ.

ಅವರು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ “ಪಿಲಿ ಪಂಜ” ತುಳು ಸಿನಿಮಾ ಡಿಸೆಂಬರ್ 12ರಂದು ಬಿಡುಗಡೆಯಾಗಲಿದ್ದು, ಮೂರು ಕನ್ನಡ ಸಿನಿಮಾಗಳು ಪ್ರಸ್ತುತ ಚಿತ್ರೀಕರಣ ಹಂತದಲ್ಲಿವೆ.

ತಮ್ಮದೇ ಯಜಮಾನತ್ವದ “ಪ್ರಕೃತಿ ಕಲಾವಿದೆರ್ ಕುಡ್ಲ” ನಾಟಕ ತಂಡದ ಮೂಲಕ “ಬಿರ್ದ್ ದ ಬೀರೆರ್ ಕೋಟಿ ಚೆನ್ನಯೆರ್” ಎಂಬ ನಾಟಕವನ್ನು ನೇರವಾಗಿ ಸಮಾಜದ ಮನದಟ್ಟುಗೊಳಿಸುತ್ತಿದ್ದಾರೆ.

ಇದೇ ರೀತಿ ಅವರು ಮೂರು ತುಳು ಹಾಗೂ ಮೂರು ಕನ್ನಡ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.
ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗಿದ್ದ ಜನಪ್ರಿಯ “ಸಜ್ಜಿಗೆ ಬಜಿಲ್” ಧಾರಾವಾಹಿಯನ್ನು ನಿರ್ಮಿಸಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, “ಕೋಟಿ ಚೆನ್ನಯ” (ಚಂದನ ವಾಹಿನಿ) ಮತ್ತು “ಕಾವೇರಿ ಕನ್ನಡ ಮೀಡಿಯಂ” (ಸ್ಟಾರ್ ಸುವರ್ಣ ವಾಹಿನಿ) ಧಾರಾವಾಹಿಗಳಲ್ಲಿಯೂ ತಮ್ಮ ಅದ್ಭುತ ನಟನೆ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.

ಪತ್ನಿ ಲತಾ ರಮೇಶ್ ರೈ, ಮಕ್ಕಳು ವರ್ಷಾ, ದೀಕ್ಷಾ, ರಕ್ಷಾ ಇವರೊಂದಿಗೆ ರಮೇಶ್ ರೈ ಕುಕ್ಕುವಳ್ಳಿ ಅವರು ಕಲೆ, ನಿಷ್ಠೆ ಮತ್ತು ಶ್ರಮದ ಜೀವಂತ ಉದಾಹರಣೆಯಾಗಿ, ಹೊಸ ತಲೆಮಾರಿಗೆ ಪ್ರೇರಣೆಯಾದ ಕಲಾವಿದರಾಗಿ ರಂಗಭೂಮಿಯ ಬೆಳಕಿನಲ್ಲಿ ಪ್ರಜ್ವಲಿಸುತ್ತಿದ್ದಾರೆ.

ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

Comments are closed.