Mangalore: ಮಂಗಳೂರು: ಆತ್ಮಹತ್ಯೆಗೆ ಯತ್ನ ಮಾಡುತ್ತಿದ್ದ ತಂದೆ ಮಗುವನ್ನು ರಕ್ಷಣೆ ಮಾಡಿದ ಪಣಂಬೂರು ಪೊಲೀಸರು

Share the Article

Mangaluru: ಮಂಗಲೂರು: ವ್ಯಕ್ತಿಯೋರ್ವ ತನ್ನ ಹೆಂಡತಿಯ ಜೊತೆ ಜಗಳ ಮಾಡಿ ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನ ಜೊತೆ ಸಮುದ್ರಕ್ಕೆ ಸಾಯಲು ಹೋಗಿದ್ದು, ಅದರ ವಿಡಿಯೋ ಮಾಡಿ ವಾಟ್ಸಪ್‌ ಗ್ರೂಪಿಗೆ ಹಾಕಿದ್ದಲ್ಲದೇ ನಂತರ ತನ್ನ ಮನೆಗೆ ಬಂದು ನೇಣು ಹಾಕಲು ಪ್ರಯತ್ನ ಮಾಡಲೆತ್ನಿಸಿದಾಗ ಪೊಲೀಸರ ಸಮಯಪ್ರಜ್ಞೆಯಿಂದ ರಕ್ಷಣೆ ನಡೆದ ಘಟನೆ ಕಾವೂರಿನಲ್ಲಿ ನಡೆದಿದೆ.

ರಾಜೇಶ್‌ ಅಲಿಯಾಸ್‌ ಸಂತು (35) ಸಾಯಲು ಹೋಗಿ ರಕ್ಷಿಸಲ್ಪಟ್ಟ ವ್ಯಕ್ತಿ. ಇವರು ಕಾವೂರು ಶಾಂತಿನಗರ ನಿವಾಸಿ. ಬಜ್ಪೆಯ ಯುವತಿಯನ್ನು ಏಳು ವರ್ಷದ ಹಿಂದೆ ಪ್ರೀತಿ ಮಾಡಿ ಮದುವೆಯಾಗಿದ್ದು, ಈ ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಇದೆ. ಕೆಲವು ಸಮಯದಿಂದ ಗಂಡ ತನ್ನ ಪತ್ನಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದು, ಜಗಳ ಮಾಡುತ್ತಿದ್ದನಂತೆ.

ಪತ್ನಿ ಸರಿಯಿಲ ಎನ್ನುವ ಕಾರಣದಿಂದ ಪತಿ ರಾಜೇಶ್‌ ಸೋಮವಾರ ಸಂಜೆ ತನ್ನ ಮಗಳನ್ನು ಕರೆದುಕೊಂಡು ತಣ್ಣೀರು ಬಾವಿ ಬೀಚ್‌ಗೆ ಹೋಗಿ, ನಾವು ಸಾಯೋಣ ಮಗಳೇ, ಅವಳಿಗೆ ಬೇಕಾದ ರೀತಿಯಲ್ಲಿ ಅವಳು ಇರಲಿ ನಮಗೆ ಯಾರೂ ಬೇಡ ಎಂದು ಹೇಳುತ್ತಾ ನಡೆಯುತ್ತಾ ವಿಡಿಯೋ ಮಾಡಿದ್ದು, ಇದನ್ನು ತನ್ನ ಅಕ್ಕ ಮತ್ತು ಇತರ ಸಂಬಂಧಿಕರಿಗೂ ಕಳುಹಿಸಿದ್ದಾನೆ. ಇದು ವಾಟ್ಸಪ್‌ನಲ್ಲಿ ಕ್ಷಣಮಾತ್ರದಲ್ಲಿ ಶೇರ್‌ ಆಗಿದೆ. ಕೊನೆಗೆ ಇದು ಪಣಂಬೂರು ಪೊಲೀಸರಿಗೂ ತಲುಪಿದೆ.

ಇನ್ಸ್‌ಪೆಕ್ಟರ್‌ ಮಹಮ್ಮದ್‌ ಸಲೀಂ ಅವರು ಈ ವಿಡಿಯೋ ನೋಡಿ ಕೂಡಲೇ ತಮ್ಮ ಸಿಬ್ಬಂದಿಯನ್ನು ಬೀಚ್‌ ಗೆ ಕಳುಹಿಸಿದ್ದಾರೆ. ಆದರೆ ಆತ ಅಲ್ಲಿ ಇರಲಿಲ್ಲ. ನಂತರ ಸೈಬರ್‌ ಪೊಲೀಸ್‌ ಸಹಾಯ ಪಡೆದು ಆತನ ನಂಬರ್‌ ಟ್ರೇಸ್‌ ಮಾಡಿ ಲೊಕೇಶನ್‌ ನೋಡಿದಾಗ, ಕಾವೂರು ಶಾಂತಿನಗರ ತೋರಿಸಿತ್ತು. ಕೂಡಲೇ ಕಾವೂರು ಠಾಣೆಗೆ ತಿಳಿಸಿ, ಪಣಂಬೂರು ಠಾಣೆಯ ಇನ್ನೊಂದು ತಂಡವನ್ನು ಇನ್ಸ್‌ಪೆಕ್ಟರ್‌ ಸಲೀಂ ಕಳುಹಿಸಿದ್ದಾರೆ.

ಮನೆಗೆ ಬಾಗಿಲು ಹಾಕಿದ್ದು ಹೊರಗಿನಿಂದ ಬಡಿದಿದ್ದಾರೆ ಪೊಲೀಸರು, ಆದರೂ ಮನೆ ಬಾಗಿಲು ತೆರೆಯಲಿಲ್ಲ. ನಂತರ ಪೊಲೀಸರು ಮನೆ ಬಾಗಿಲು ಒಡೆದು ಒಳಗೆ ಹೋಗಿದ್ದು, ಪಕ್ಕಾಸಿಗೆ ನೇಣು ಹಗ್ಗ ಹಾಕಿ ಮಗಳ ಜೊತೆಗೆ ನೇಣಿಗೆ ಶರಣಾಗಲು ರೆಡಿ ಮಾಡುತ್ತಿದ್ದು, ಕೂಡಲೇ ಪೊಲೀಸರು ಆತನನ್ನು ಹಿಡಿದು ತಂದೆ ಮಗಳನ್ನು ರಕ್ಷಣೆ ಮಾಡಿದ್ದಾರೆ.

ಕಾವೂರು ಠಾಣೆಯಲ್ಲಿ ಮಂಗಳವಾರ ಗಂಡ-ಹೆಂಡತಿ ಇಬ್ಬರನ್ನು ಕರೆಸಿ ಪೊಲೀಸರು ಬುದ್ಧಿವಾದ ಹೇಳಿದ್ದಾರೆ. ಪೊಲೀಸರ ಸಕಾಲಿಕ ಪ್ರಯತ್ನದಿಂದ ಸಾಯಲು ಮುಂದಾಗಿದ್ದ ಜೀವಗಳು ಉಳಿದಿದೆ. ಇದಕ್ಕೆ ಪೊಲೀಸ್‌ ಕಮೀಷನರ್‌ ಸುಧೀರ್‌ ರೆಡ್ಡಿ ಆದಿಯಾಗಿ ಸಾರ್ವಜನಿಕರ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

Comments are closed.