8th Pay Commission: 8ನೇ ವೇತನ ಆಯೋಗಕ್ಕೆ ಖಡಕ್ ಮಹಿಳಾ ಸಾರಥಿಯನ್ನು ನೇಮಿಸಿದ ಕೇಂದ್ರ – ಯಾರು ಈ ನ್ಯಾ. ರಂಜನಾ ದೇಸಾಯಿ?

8th Pay Commission: ಕೇಂದ್ರ ಸರ್ಕಾರ ಮಂಗಳವಾರ ತನ್ನ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದು, ಬಹುನಿರೀಕ್ಷಿತ 8ನೇ ಕೇಂದ್ರ ವೇತನ ಆಯೋಗ(ಸಿಪಿಸಿ) ರಚನೆಗೆ ಅನುಮೋದನೆ ನೀಡಿದೆ. ಅಲ್ಲದೆ ಈ ಆಯೋಗಕ್ಕೆ ಖಡಕ್ ಮಹಿಳಾ ಸಾರಥಿಯಾಗಿ ನ್ಯಾ. ರಂಜನಾ ದೇಸಾಯಿ ಅವರನ್ನು ಕೇಂದ್ರರಂಜನಾ ದೇಸಾಯಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಆಯೋಗ ರಚನೆಗೆ ಸರ್ಕಾರವು ಮಹಿಳಾ ಸಾರಥಿಯನ್ನು ನೇಮಿಸಿದ್ದೇಕೆ? ಯಾರು ಈ ರಂಜನಾ ದೇಸಾಯಿ?

ಹೌದು, 8ನೇ ವೇತನ ಆಯೋಗಕ್ಕೆ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅಧ್ಯಕ್ಷರಾಗಿ, ಐಐಎಂ ಬೆಂಗಳೂರು ಪ್ರೊಫೆಸರ್ ಪುಲಕ್ ಘೋಷ್ ಅವರು ಸದಸ್ಯರಾಗಿ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರು ಸದಸ್ಯ-ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಈ ಆಯೋಗವು ರಚನೆಯಾದ 18 ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಗಡುವು ನೀಡಲಾಗಿದೆ.
ಎಂಟನೇ ವೇತನ ಆಯೋಗದ ಸಾರಥ್ಯ ವಹಿಸಿರುವ ರಂಜನಾ ದೇಸಾಯಿ ಅವರು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನವನ್ನು ಪರಿಷ್ಕರಿಸುವ ಈ ಮಹತ್ವದ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಭಾರತದ ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರು, ದೇಶದ ಹಲವು ಕಠಿಣ ಮತ್ತು ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಹೊಂದಿದ್ದಾರೆ.
ರಂಜನಾ ಅವರು ವೃತ್ತಿಜೀವನದ ಕೆಲವು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಬಾಂಬೆ ಹೈಕೋರ್ಟ್‌ನಿಂದ ವೃತ್ತಿ ಆರಂಭಿಸಿ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಅವರದ್ದು. ಈ ಹಿಂದೆ, ಭಾರತೀಯ ಪತ್ರಿಕಾ ಮಂಡಳಿಯ (PCI) ಅಧ್ಯಕ್ಷೆಯಾಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದರು. ಅಲ್ಲದೆ ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡುವ ಡಿಲಿಮಿಟೇಶನ್ ಆಯೋಗದ ಅಧ್ಯಕ್ಷೆಯಾಗಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಅಂದಹಾಗೆ ಆಡಳಿತಾತ್ಮಕ ದಕ್ಷತೆ ಮತ್ತು ನ್ಯಾಯಾಂಗ ನಿಷ್ಪಕ್ಷಪಾತದ ದೃಷ್ಟಿಯಿಂದಲೂ ನ್ಯಾಯಮೂರ್ತಿ ದೇಸಾಯಿ ಅವರ ನೇಮಕಾತಿ ಮಹತ್ವ ಪಡೆದಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69 ಲಕ್ಷ ಪಿಂಚಣಿದಾರರ ಭವಿಷ್ಯವನ್ನು ನಿರ್ಧರಿಸುವ, ಹಾಗೂ ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ವೇತನ ಆಯೋಗದ ಚುಕ್ಕಾಣಿ ಹಿಡಿಯಲು ಅವರ ಅಪಾರ ಅನುಭವವೇ ಶ್ರೀರಕ್ಷೆಯಾಗಿದೆ ಎನ್ನಲಾಗಿದೆ.
Comments are closed.