Dakshina Kannada: ಗೋ ಪೂಜೆಯಂದೇ ಗೋ ಹಂತಕರಿಗೆ ಗುಂಡೇಟು; ಪೊಲೀಸ್‌ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಅರುಣ್‌ ಕುಮಾರ್‌ ಪುತ್ತಿಲ

Share the Article

Dakshina Kannada: ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದ ಖದೀಮರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಬೆಳ್ಳಿಚಡವು ಬಳಿ ನಡೆದಿದೆ. ಪುತ್ತೂರು ಪೊಲೀಸರು ಅಕ್ರಮ ಗೋ ಕಳ್ಳರಿಗೆ ಗುಂಡೇಟು ನೀಡಿದ್ದು, ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ಅರುಣ್‌ ಪುತ್ತಿಲ ಹೇಳಿರುವುದಾಗಿ ವರದಿಯಾಗಿದೆ. ದಕ್ಷಿಣ ಕನ್ನಡ ಎಸ್ಪಿ, ಡಿವೈಎಸ್ಲಿ, ಠಾಣಾಧಿಕಾರಿ ಜಂಬುರಾಜ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.

ಹಲವು ವರ್ಷಗಳಿಂದ ಗೋ ಕಳ್ಳರ ತಂಡ ಗಡಿಭಾಗದಲ್ಲಿ ಕೇರಳಕ್ಕೆ ಅಕ್ರಮ ಗೋಕಳ್ಳಸಾಗಾಟ ನಡೆಸುತ್ತಿದ್ದ ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಹಲವು ಪ್ರತಿಭಟನೆಗಳನ್ನು ಮಾಡಿತ್ತು. ಹಿಂದೂ ಸಂಘಟನೆಗಳ ಹೋರಾಟಕ್ಕೆ ಇಂದು ದೊಡ್ಡ ಜಯ ದೊರಕಿದೆ. ಗೋ ಕಳ್ಳಸಾಗಾಟದ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು ಅರುಣ್‌ ಪುತ್ತಿಲ ಹೇಳಿದರು.

ಹಾಸನದಿಂದ ಕೇರಳದತ್ತ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಪುತ್ತೂರು ಪೊಲೀಸರು ತಡೆಯಲು ಯತ್ನ ಮಾಡಿದ್ದು, ಲಾರಿ ನಿಲ್ಲಿಸದೇ ಪರಾರಿಯಾಗಲು ಯತ್ನ ಮಾಡಿದ್ದರು. ಲಾರಿ ಚಾಲಕ ನೇರವಾಗಿ ಪೊಲೀಸರ ಮೇಲೆ ಲಾರಿ ಹತ್ತಿಸಲು ಮುಂದಾಗಿದ್ದು, ಈ ವೇಳೆ ಪೊಲೀಸರು ಫೈರಿಂಗ್‌ ಮಾಡಿದ್ದಾರೆ.

ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಅದರೊಳಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 10 ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ನಂತರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ಕುರಿತು ಪುತ್ತೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Comments are closed.