Karkala: ಕಾರ್ಕಳ: ಬಡ್ಡಿ ವ್ಯಾಪಾರಿಯ ಕೊಲೆಗೆ ಕಾರಣವಾದ ಸ್ನೇಹಿತನ ಗೆಳತಿಯೊಂದಿಗಿನ ಸಲುಗೆ?

Share the Article

Karkala: ಕಾರ್ಕಳ: ಕಾರ್ಕಳದಲ್ಲಿ ನಿನ್ನೆ ನಡೆದ ಬಡ್ಡಿ ವ್ಯಾಪಾರಿಯ ಬರ್ಬರ ಕೊಲೆಗೆ ಆತನ ಸ್ನೇಹಿತನ ಗೆಳತಿಯೊಂದಿಗಿನ ಸಲುಗೆಯೆ ಪ್ರಮುಖ ಕಾರಣವೆಂಬ ಅಂಶ ಇದೀಗ ಪೊಲೀಸ್ ತನಿಖೆಯಿಂದ ಸಾಬೀತಾಗಿದ್ದು ಕೊಲೆಗೊಯ್ದ ಆರೋಪಿ ಸ್ನೇಹಿತನನ್ನು ಬಂಧಿಸಲಾಗಿದೆ.

ಕಾರ್ಕಳದ ಕುಂಟಪಾಡಿಯಲ್ಲಿ ನಿನ್ನೆ ನಸುಕಿನ ವೇಳೆ ಬರ್ಬರವಾಗಿ ಹತ್ಯೆಯಾದ ವ್ಯಕ್ತಿ ಬಡ್ಡಿ ವ್ಯಾಪಾರಿಯಾಗಿರುವ ನವೀನ್ ಪೂಜಾರಿ ಎಂಬವರಾಗಿದ್ದು ಕೊಲೆಗೈದ ಆರೋಪಿ ನವೀನ್ ಪೂಜಾರಿಯ ಸ್ನೇಹಿತನಾದ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಪರೀಕ್ಷಿತ್ ಎಂಬಾತ ಇದೀಗ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ.

ಮಂಗಳೂರು ಪಡೀಲ್‌ ನಿವಾಸಿ ನವೀನ್ ಪೂಜಾರಿ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಬೇರೆಯಾಗಿ ಕಾರ್ಕಳದ ಕುಂಟಪಾಡಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಬಡ್ಡಿ ವ್ಯಾಪಾರ ನಡೆಸುತ್ತಿದ್ದ ಎನ್ನಲಾಗಿದೆ. ಅದೇ ರೀತಿ ನವೀನ್ ಪೂಜಾರಿಯ ಸ್ನೇಹಿತನಾಗಿರುವ ಬೆಳ್ತಂಗಡಿ ಗ್ರಾಮದ ನಡನಿವಾಸಿ ಪರೀಕ್ಷಿತ್ ಮಂಗಳೂರಿನಲ್ಲಿ ಖಾಸಗಿ ಬಸ್ಸಿನ ಡ್ರೈವರಾಗಿದ್ದು, ಆತನು ಕೂಡ ತನ್ನ ಪತ್ನಿಯನ್ನು ತ್ಯಜಿಸಿ ಕಾರ್ಕಳದ ದೂಪದಕಟ್ಟೆ, ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಎನ್ನಲಾಗಿದೆ.

ಆದರೆ ಪರೀಕ್ಷಿತ್ ಗೆ ಈ ಪರಿಸರದಲ್ಲೊಬ್ಬಳು ಸ್ನೇಹಿತೆ ಇದ್ದು ಈ ಸ್ನೇಹಿತೆಯ ಜೊತೆ ನವೀನ್ ಪೂಜಾರಿ ಸಲುಗೆ ಬೆಳೆಸಿಕೊಂಡಿದ್ದನೆನ್ನಲಾಗಿದೆ. ಈ ವಿಚಾರ ತಿಳಿದ ಪರೀಕ್ಷಿತ್ ಈ ಹಿಂದೆ ತನ್ನ ಗೆಳೆಯನಾದ ನವೀನ್ ಪೂಜಾರಿಗೆ ಎಚ್ಚರಿಕೆ ನೀಡಿದ್ದನೆನ್ನಲಾಗಿದೆ. ಆದರೆ ನವೀನ್ ಪೂಜಾರಿ ಆ ಬಳಿಕವು ಆಕೆಯೊಂದಿಗೆ ಮತ್ತೆ ಸಲುಗೆಯಿಂದ ವರ್ತಿಸುತ್ತಿರುವುದನ್ನು ತಿಳಿದ ಪರಿಕ್ಷಿತ್ ನಿನ್ನೆ ನಸುಕಿನ ಜಾವ ನವೀನ್ ಪೂಜಾರಿಯನ್ನು ನಡು  ರಸ್ತೆಯಲ್ಲೇ ಬರ್ಬರವಾಗಿ ಕೊಂದು ಪರಾರಿಯಾಗಿದ್ದ ಎನ್ನಲಾಗಿದೆ. ಆದರೆ ಪೊಲೀಸ್ ತನಿಖೆ ವೇಳೆ ಸತ್ಯ ವಿಚಾರ ಬಹಿರಂಗವಾಗಿದ್ದು ಅದರಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿ ಪರೀಕ್ಷಿತ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Comments are closed.