Elephant Calf: ಹೆತ್ತಮ್ಮನ ಹುಡುಕಿಕೊಂಡು ತುಂಬಿದ ಹೊಳೆ ದಾಟಿ ಬಂದ ಆನೆ ಮರಿ – ತಾಯಿಯ ಮಡಿಲು ಸೇರಿಸಲು ವಿಫಲವಾದ ಕೇರಳ ಅರಣ್ಯ ಇಲಾಖೆ

Share the Article

Elephant Calf: ತಾಯಿಯಿಂದ ಬೇರ್ಪಟ್ಟು ಕೇರಳದ ಶಾಲಾ ಆವರಣದಲ್ಲಿ ಕಾಣಿಸಿಕೊಂಡಿದ್ದ ಆನೆ ಮರಿ, ಅಮ್ಮನ ಹುಡುಕಾಟದಲ್ಲಿ ರಭಸವಾಗಿ ಹರಿಯುತ್ತಿರುವ ಹೊಳೆ ದಾಟಿ ಹೆಚ್.ಡಿ. ಕೋಟೆ ಬಳಿ ಪ್ರತ್ಯಕ್ಷವಾಗಿದೆ. ಕೇರಳದ ವೈನಾಡು ಜಿಲ್ಲೆ, ಸುಲ್ತಾನ್ ಬತೇರಿ ತಾಲೂಕಿನ ಪುಲಪಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಎರಡು ದಿನದ ಹಿಂದೆ ಕಾಣಿಸಿಕೊಂಡಿದ್ದ ಹೆಣ್ಣಾನೆ ಮರಿ, 48 ಗಂಟೆಯಲ್ಲಿ ಕರ್ನಾಟಕದ ಗಡಿ ದಾಟಿ ಹೆಚ್.ಡಿ.ಕೋಟೆ ತಾಲೂಕು ಬಳ್ಳೆ ಸಮೀಪದ ಕಡಗದ್ದೆ ಬಳಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.

ಸುಮಾರು ಮೂರರಿಂದ ಐದು ತಿಂಗಳ ಈ ಹೆಣ್ಣಾನೆ ಮರಿ ಎರಡು ದಿನದ ಹಿಂದೆ ತಾಯಿಂದ ಬೇರ್ಪಟ್ಟು ಕೇರಳದ ಪುಲಪಳ್ಳಿಯಲ್ಲಿ ಓಡಾಡುತ್ತಿತ್ತು. ಅಲ್ಲಿನ ಸರ್ಕಾರಿ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳ ಪಾದರಕ್ಷೆಗಳನ್ನು ಚೆಲ್ಲಾಪಿಲ್ಲಿ ಮಾಡಿತ್ತು. ಬಳಿಕ ಅಲ್ಲಿನ ಅರಣ್ಯ ಸಿಬ್ಬಂದಿ ಆನೆ ಮರಿಯನ್ನು ರಕ್ಷಿಸಿ, ಅದನ್ನು ತಾಯಿಯ ಮಡಿಲಿಗೆ ಸೇರಿಸಲೆಂದು ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದರು. ಆದರೆ ಅದು ತಾಯಿ ಹುಡುಕುತ್ತಾ ಮೈದುಂಬಿ ಹರಿಯುತ್ತಿರುವ ಕಪಿಲ ಹೊಳೆಯನ್ನು ದಾಟಿ ಕರ್ನಾಟಕದ ಗಡಿ ಪ್ರವೇಶಿಸಿದೆ.

ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಬ ಹರಿಯುತ್ತಿರುವ ಹೊಳೆಯನ್ನು ಈಜಿಕೊಂಡು ಸುರಕ್ಷಿತವಾಗಿ ದಡ ಸೇರಿರುವುದು ಅಚ್ಚರಿ ಮೂಡಿಸಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವಲಯದ ಸಿಬ್ಬಂದಿ ಆನೆಮರಿಯನ್ನು ರಕ್ಷಣೆ ಮಾಡಿ, ಅದರ ತಾಯಿ ಬರುವಿಕೆಗಾಗಿ ಅರಣ್ಯ ಪ್ರದೇಶದಲ್ಲಿ ಮರಿಯೊಂದಿಗೆ ಕಾಯುತ್ತಿದ್ದಾರೆ.

ಮೂಲಗಳ ಪ್ರಕಾರ ತಾಯಿ ಆನೆ ಕೇರಳ ಭಾಗದಲ್ಲಿದ್ದು ರಭಸವಾಗಿ ಹರಿಯುತ್ತಿರುವ ಹೊಳೆ ದಾಟಲು ಮುಂದಾಗುವುದಿಲ್ಲ ಎಂದು ಅಂದಾಜಿಸಲಾಗಿದೆ. ಆದರೂ ಅರಣ್ಯ ಸಿಬ್ಬಂದಿ ಮರಿ ಆನೆಯ ತಾಯಿಂರೊಂದಿಗೆ ಸೇರಿಸುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಒಂದು ವೇಳೆ ಬುಧವಾರ ತಾಯಿ ಆನೆ ಸಿಗದಿದ್ದರೆ ಮೇಲಾಧಿಕಾರಿಗಳ ಅನುಮತಿ ಪಡೆದು ಮರಿಯನ್ನು ಆನೆ ಶಿಬಿರಕ್ಕೆ ಕೊಂಡೊಯ್ದು ಪಾಲನೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಾಣಿ ಪ್ರಿಯರ ಆಗ್ರಹ: 3-4 ದಿನಗಳಿಂದ ಕೇರಳ ಭಾಗದಲ್ಲಿ ತಾಯಿಯಿಂದ ಬೇರ್ಪಟ್ಟು ಓಡಾಡುತ್ತಿರುವ ಆನೆಮರಿಯನ್ನು ಅಲ್ಲಿನ ಅರಣ್ಯ ಸಿಬ್ಬಂದಿ ತಾಯಿ ಮಡಿಲಿಗೆ ಸೇರಿಸುವಲ್ಲಿ ವಿಫಲರಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಒಳಗಾಗುವ ಅಪಾಯವಿತ್ತಾದರೂ ನಿರ್ಲಕ್ಷ್ಯ ಮಾಡಿದ್ದಾರೆ. ಸದ್ಯ ತಾಯಿಯ ಅರಸಿ ಹೇಗೊ ಸುರಕ್ಷಿತವಾಗಿ ಕರ್ನಾಟಕದ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿರುವ ಆನೆಮರಿಯನ್ನು ಯಾವುದಾದರೂ ಕ್ಯಾಂಪ್‌ನಲ್ಲಿಟ್ಟು ಸಲಹಬೇಕೆಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.

Chitradurga: ಕಾಲೇಜು ವಿದ್ಯಾರ್ಥಿನಿಯ ಬರ್ಬರ ಹತ್ಯೆ, ರೇಪ್‌ ಮಾಡಿ ಬೆಂಕಿ ಹಚ್ಚಿ ಸುಟ್ಟು ಬಿಟ್ಟ ದುಷ್ಕರ್ಮಿಗಳು

Comments are closed.