KRS Dam: ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಅಡಿಗಲ್ಲು ಹೇಳಿಕೆ – ದಸರಾ ಪ್ರಾರಂಭಿಸಿದ್ದು ಟಿಪ್ಪು ಎಂದು ಹೇಳಿಬಿಡಿ ಮಹದೇವಪ್ಪನವರೇ.. – ಮಾಜಿ ಸಂಸದ ಸಿಂಹ ತಿರುಗೇಟು

KRS Dam: ದಸರಾ ಪ್ರಾರಂಭಮಾಡಿದ್ದು ಕೂಡ ಟಿಪ್ಪುಸುಲ್ತಾನ್ ಎಂದು ಹೇಳಿಬಿಡಿ, ಮೈಸೂರಿನ ಜನ ಧನ್ಯರಾಗುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್. ಸಿ.ಮಹದೇವಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ಕೆಆರ್‌ಎಸ್ ಅಣೆಕಟ್ಟೆಗೆ ಅಡಿಗಲ್ಲು ಇಟ್ಟಿದ್ದೇ ಟಿಪ್ಪು ಎಂಬ ಡಾ.ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ವಾರ ಡಾ.ಯತೀಂದ್ರ ನಾಲ್ವಡಿ ಅವರಿಗಿಂತ ನಮ್ಮಪ್ಪನೇ ದೊಡ್ಡ ವ್ಯಕ್ತಿ ಎಂಬ ಹೇಳಿಕೆ ಕೊಟ್ಟರು. ಈ ವಾರ ಡಾ.ಮಹದೇವಪ್ಪನವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮನೆ ಮಂದಿಯ ಒಡವೆಯನ್ನು ಅಡವಿಟ್ಟು ಕಟ್ಟಿದ ಕನ್ನಂಬಾಡಿ ಅಣೆಕಟ್ಟೆಗೆ ಅಡಿಗಲ್ಲು ‘ಇಟ್ಟವನು ಟಿಪ್ಪು ಎಂದಿದ್ದಾರೆ. ಜೂನಿಯರ್ ಡಾಕ್ಟರ್ ಹೊಸ ಇತಿಹಾಸ ಬರೆಯಲು ಹೊರಟರೆ, ಸೀನಿಯರ್ ಡಾಕ್ಟರ್ ಇತಿಹಾಸ ತಿರುಚಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರ ಪರಿಶ್ರಮದಿಂದ ನಿರ್ಮಾಣವಾಗಿ ಇತ್ತೀಚೆಗಷ್ಟೇ ಉದ್ಘಾಟನೆಯಾದ ಸಿಗಂಧೂರು ಸೇತುವೆಗೂ ಡಿಪಿಆರ್ ಮಾಡಿದ್ದು ನಾವೇ ಎಂದು ಕ್ರೆಡಿಟ್ ಪಡೆಯಲು ಪ್ರಯತ್ನಿಸಿದಿರಿ. ಡಿಪಿಆರ್ ಇಲ್ಲದೆ ಏನನ್ನೂ ಕಟ್ಟಲಾಗುವುದಿಲ್ಲ. ಹಾಗಾದರೆ ಟಿಪ್ಪು ಕನ್ನಂಬಾಡಿಗೆ ಅಡಿಗಲ್ಲು ಇಟ್ಟಿದ್ದು ನಿಜವಾದರೆ ಅದಕ್ಕೆ ಡಿಪಿಆರ್ಲ ಮಾಡಿದ್ದು ಯಾರು?. ಅವರ ಹೆಸರನ್ನೂ ಹೇಳಿದರೆ ಹೊಸ ಇತಿಹಾಸದ ಬಗ್ಗೆ ಜನರಿಗೆ ಜ್ಞಾನಾರ್ಜನೆಯಾದಂತಾಗುತ್ತದೆ. ನಿಮ್ಮಿಂದ ಈ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂದರು.
ಟಿಪ್ಪು ಇದ್ದಾಗ ವಿಶ್ವೇಶ್ವರಯ್ಯನವರು ಹುಟ್ಟೇ ಇರಲಿಲ್ಲ. ನಾಲ್ವಡಿ ಅವರಂತಹ 1 ಜನಾನುರಾಗಿ ದೊರೆ ಹಾಗೂ ವಿಶ್ವೇಶ್ವರಯ್ಯ ಅವರಂತಹ ಜಗದ್ವಿಖ್ಯಾತ ಇಂಜಿನಿಯರ್ ಇಲ್ಲದಿದ್ದರೆ ಕನ್ನಂಬಾಡಿ ಕಟ್ಟೆ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ. ಟಿಪ್ಪು 1799ರಲ್ಲೇ ಮೃತ – ಪಟ್ಟರು. ಅಣೆಕಟ್ಟೆ ನಿರ್ಮಾಣ ಪ್ರಾರಂಭ ಮಾಡಿದ್ದು 1911ರಲ್ಲಿ. ಒಂದು ಶತಮಾನಕ್ಕಿಂತ ಹೆಚ್ಚು ಕಾಲ ಯಾರು ಏನು ಮಾಡುತ್ತಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆಯುವುದಕ್ಕಿಂತ ಸಾಕಷ್ಟು ಮೊದಲೇ ದಲಿತ ಸಮುದಾಯಕ್ಕೆ ಮೀಸಲಾತಿ ಕೊಟ್ಟು ದೇಶಕ್ಕೆ ಮಾದರಿಯಾದ ನಾಲ್ವಡಿ ಅವರ ಬಗ್ಗೆ ನಿಮಗ್ಯಾಕಿಷ್ಟು ಕೋಪ. ಇಂತಹ ದೊಡ್ಡ ವ್ಯಕ್ತಿ ಮೇಲೂ ಯಾಕೆ ದ್ವೇಷ ಕಾರುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರೇ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾಯ್ದೆ ತರುತ್ತೇನೆಂದು ಹೇಳುತ್ತಲೇ ಇದ್ದೀರಿ. ದಯವಿಟ್ಟು ಆದಷ್ಟು ಬೇಗ ಕಾಯ್ದೆ ತನ್ನಿ ಸುಳ್ಳು ಹೇಳುತ್ತಿರುವ ಡಾ.ಮಹದೇವಪ್ಪ, ಡಾ.ಯತೀಂದ್ರ, ಸಂತೋಷ್ ಲಾಡ್, ಪ್ರಿಯಾಂಕ ಖರ್ಗೆ ಮೇಲೆ ಮೊದಲ ಕೇಸ್ ಹಾಕಿ. ಆಗ ಸುಳ್ಳು ಹೇಳುವ, ಇತಿಹಾಸ ತಿರುಚುವ ಪ್ರಯತ್ನಗಳು ನಿಲ್ಲುತ್ತವೆ. ನಿಮ್ಮ ಮಗ, ಕ್ಯಾಬಿನೆಟ್ ಸದಸ್ಯರು ಮಹಾರಾಜರ ವಿರುದ್ಧ ಹೇಳಿಕೆ ನೀಡಿ, ಅವರ ಕೊಡುಗೆಯನ್ನೇ ಅಲ್ಲಗಳೆಯುತ್ತಿರುವುದನ್ನು ನೋಡಿದರೆ ನಿಮಗೆ ರಕ್ತಗತವಾಗಿ ದ್ವೇಷ ಬಂದಿದೆ. ಅದರ ಮೇಲೇ ರಾಜಕಾರಣ ಮಾಡು ತ್ತಿದ್ದೀರಿ ಎಂಬುದು ಸ್ಪಷ್ಟವಾಗುತ್ತದೆ. ಇದನ್ನು ಮೈಸೂರಿನ ಜನ ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Kakkada Marathon: ಕೊಡಗಿನಲ್ಲಿ ಕಕ್ಕಡ 18ರ ಪ್ರಯುಕ್ತ ಮ್ಯಾರಥಾನ್ – ಫಲಿತಾಂಶ ಇಂದು ಪ್ರಕಟ
Comments are closed.