Kerala: ಯುಎಇಯಲ್ಲಿ ಮತ್ತೊಬ್ಬ ಕೇರಳ ಮಹಿಳೆ ಶವವಾಗಿ ಪತ್ತೆ, ಪತಿಯಿಂದ ವರದಕ್ಷಿಣೆ ಕಿರುಕುಳ ಆರೋಪ – ಕುಟುಂಬದಿಂದ ಕೇಸು ದಾಖಲು

Share the Article

Kerala Woman Death: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಅಥುಲ್ಯಾ (29)ಎಂಬ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಈ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಇದೀಗ ಕೇರಳ ಪೊಲೀಸರು ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಜುಲೈ 18 ಮತ್ತು 19 ರ ನಡುವೆ, ಮಹಿಳೆಯ ಪತಿ ಸತೀಶ್ ಕತ್ತು ಹಿಸುಕಿ, ಹೊಟ್ಟೆಗೆ ಒದ್ದು, ತಲೆಗೆ ತಟ್ಟೆಯಿಂದ ಹೊಡೆದು ಸಾಯಿಸಿದ್ದಾರೆ ಎಂದು ಆರೋಪ ಮಾಡಿ ಅಥುಲ್ಯಾ ತಾಯಿ ನೀಡಿದ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಸತೀಶ್‌ ಮತ್ತು ಅಥುಲ್ಯಾ 2014 ರಲ್ಲಿ ಮದುವೆಯಾಗಿದ್ದು, ಈ ಸಂದರ್ಭದಲ್ಲಿ ಬೈಕ್ ಮತ್ತು 43 ಪೌಂಡ್ ಚಿನ್ನಾಭರಣ ನೀಡಲಾಗಿತ್ತು. ಆದರೂ ಸಾಕಷ್ಟು ವರದಕ್ಷಿಣೆ ತರಲಿಲ್ಲ ಎಂದು ಆಕೆಯನ್ನು ಪದೇ ಪದೇ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.

ಆಕೆಯ ಪತಿ ಸತೀಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ, 1961 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವರದಕ್ಷಿಣೆ ಬೇಡಿಕೆಯ ಮೇರೆಗೆ ಮಹಿಳೆಗೆ ಹಲವು ವರ್ಷಗಳಿಂದ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗಿತ್ತು ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.

ಕೊಲ್ಲಂನ ರಾಜಶೇಖರನ್ ಪಿಳ್ಳೈ ಮತ್ತು ತುಳಸಿಬಾಯಿ ದಂಪತಿಯ ಪುತ್ರಿ ಅತುಲ್ಯ ಒಬ್ಬ ಚಿಕ್ಕ ಮಗಳನ್ನು ಅಗಲಿದ್ದಾರೆ. ಸತೀಶ್ ಮದ್ಯವ್ಯಸನಿಯಾಗಿದ್ದು, ಆಗಾಗ್ಗೆ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದರು ಎಂದು ಆಕೆಯ ತಂದೆ ಆರೋಪಿಸಿದ್ದಾರೆ. “ಒಮ್ಮೆ ಆಕೆಯ ಮೇಲೆ ದೈಹಿಕ ಹಲ್ಲೆ ನಡೆದಾಗ, ನಾನು ಅವಳನ್ನು ಮನೆಗೆ ಕರೆದುಕೊಂಡು ಹೋಗಲು ನಿರ್ಧಾರ ಮಾಡಿದ್ದು, ಆಗ ಆತ ಕ್ಷಮೆಯಾಚಿಸಿದ್ದು, ನಂತರ ನನ್ನ ಮಗಳು ಕೂಡಾ ಆತನನ್ನು ಕ್ಷಮೆ ನೀಡಿದ್ದಾಳೆ ಎಂದು ರಾಜಶೇಖರನ್ ಹೇಳಿದರು.

ಆದರೆ ಗಂಡ ಸತೀಶ್‌ ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ನಿರಾಕರಣೆ ಮಾಡಿದ್ದಾರೆ ಎಂದು ಯುಎಇ ಮಾಧ್ಯಮ ಮುಖಾಂತರ ಹೇಳಿದ್ದಾರೆ. ಆದರೆ, ಅಥುಲ್ಯಾ ಸಾವು ಅನುಮಾನಾಸ್ಪದ ಎಂದು ಪೋಷಕರು ಸಂಶಯಿಸಿದ್ದಾರೆ. ಅವರು “ನನ್ನ ಮಗಳು ಆತ್ಮಹತ್ಯೆಯಿಂದ ಸಾಯುತ್ತಾಳೆ ಎಂದು ನಾನು ನಂಬುವುದಿಲ್ಲ. ಅವನು ಮದ್ಯವ್ಯಸನಿ. ಅವನ ಎಲ್ಲಾ ಚಿತ್ರಹಿಂಸೆಯನ್ನು ನನ್ನ ಮಗಳು ಸಹಿಸಿಕೊಂಡಳು. ಈ ಹಿಂದೆಯೂ ಸಹ, ಅಂತಹ ಸಮಸ್ಯೆಗಳು ಸಂಭವಿಸಿದ್ದವು ಮತ್ತು ಪೊಲೀಸರಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆದರೆ ಮಾತ್ರ ನಿಜ ವಿಷಯ ಹೊರಗೆ ಬರುತ್ತದೆ ”ಎಂದು ಅವರು ಹೇಳಿದರು. ಅಥುಲ್ಯಾ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಆಕೆಯ ಪತಿ ಪ್ಲಾಸ್ಟಿಕ್ ಸ್ಟೂಲ್ ಎತ್ತಿ ಹೊಡೆಯುತ್ತಿರುವುದನ್ನು ತೋರಿಸುವ ವೀಡಿಯೊಗಳನ್ನು ಆಕೆಯ ಕುಟುಂಬ ಬಿಡುಗಡೆ ಮಾಡಿದೆ.

Comments are closed.