Belthangady : ಧರ್ಮಸ್ಥಳ ಪ್ರಕರಣ- SIT ಮುಖ್ಯಸ್ಥ ಪ್ರಣವ್ ಮೊಹಂತಿ ತಂಡದಲ್ಲಿ IPS ಅನುಚೇತ್! ಸೌಜನ್ಯ ಕೊಲೆ ಸಂದರ್ಭ ಇದ್ದ ಖಡಕ್ ಅಧಿಕಾರಿ ಮತ್ತೆ ಎಂಟ್ರಿ, ನಡೆದೇ ಹೋಯ್ತು ಮಿರಾಕಲ್!

Share the Article

Belthangady: ಧರ್ಮಸ್ಥಳ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಕೊಲೆ ಅತ್ಯಾಚಾರ ಹಲ್ಲೆ ಇತ್ಯಾದಿ ಘಟನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಘನ ರಾಜ್ಯ ಸರ್ಕಾರ SIT ತನಿಖೆಗೆ ಸೂಚನೆ ನೀಡಿದೆ. ಇದೀಗ ಅನಾಮಧೇಯ ವ್ಯಕ್ತಿಯೊಬ್ಬ, ನ್ಯಾಯಾಲಯದ ಮುಂದೆ ಬಂದು, ತಾನು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಬೇರೆಯವರ ಬಲವಂತಕ್ಕೆ ಹೂತು ಹಾಕಿದ್ದೇನೆ ಎಂಬ ದೂರಿನ ನಂತರ ರಾಜ್ಯ ಸರ್ಕಾರ ಈ ನರಮೇಧ ಪ್ರಕರಣವನ್ನು ಭಾರಿ ಪ್ರಮಾಣದಲ್ಲಿ ಸೀರಿಯಸ್ ಆಗಿ ತೆಗೆದುಕೊಂಡ ಹಾಗೆ ಕಾಣಿಸುತ್ತಿದೆ.

ಇದೀಗ ಬಹು ದೊಡ್ಡ ವಿದ್ಯಮಾನ ನಡೆದಿದ್ದು ಯಾರು ಊಹಿಸದಂತಹಾ ರೀತಿಯಲ್ಲಿ ಎಸ್ಐಟಿ ತನಿಖೆ ನಡೆಸುವುದು ಮಾತ್ರವಲ್ಲ ಹೋರಾಟಗಾರರು ಬೇಡಿಕೆ ಇಟ್ಟಂತೆ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಎಂಬ ಸಿಂಹದ ಕೈಗೆ ತನಿಖೆಯ ಸಾರಥ್ಯ ಸಿಕ್ಕಿದೆ. ಹೋರಾಟಗಾರರ ಭುಜಕ್ಕೆ ಸರ್ಕಾರ ಬಹುದೊಡ್ಡ ಬಲ ತುಂಬಿದೆ.

ಹೋರಾಟಗಾರರು ಒತ್ತಾಯ ಮಾಡಿದಂತೆ, ಎಸ್ಐಟಿ ತನಿಖೆ ನಡೆಸಲು ಸರ್ಕಾರ ಆದೇಶ ನೀಡಿದ್ದು ಮಾತ್ರವಲ್ಲ ಸುಪ್ರೀಂ ಕೋರ್ಟ್ ವಕೀಲರ ತಂಡ ಬೇಡಿಕೆ ಇಟ್ಟಂತೆ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿಯವರ ಕೈಗೆ ತನಿಖೆಯ ನೇತೃತ್ವವನ್ನು ವಹಿಸಲಾಗಿದೆ.

ಯಾರು ಈ ಪ್ರಣವ್ ಮೊಹಂತಿ?

ಪ್ರಣವ್ ಮೊಹಂತಿ 1994 ರ ಬ್ರಾಂಚಿನ ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿ. ಇದೀಗ ಬೆಂಗಳೂರಿನಲ್ಲಿ ಕಂಪ್ಯೂಟರ್ ವಿಂಗ್ ನಲ್ಲಿ ಡಿಜಿಪಿಯಾಗಿರುವ ಮೊಹಂತಿಯವರ ದಕ್ಷತೆ ಮತ್ತು ಪಾರದರ್ಶಕತೆ ಇಡೀ ರಾಜ್ಯದ ಗಮನ ಸೆಳೆದಿದೆ. ಅವರ ನೇತೃತ್ವದಲ್ಲಿ ತನಿಖೆ ನಡೆಸಲು ವಕೀಲರ ತಂಡ ಬೇಡಿಕೆ ಇಟ್ಟಿತ್ತು. ಒಂದು ಪ್ರಕರಣದಲ್ಲಿ ಖುದ್ದು ಹೈಕೋರ್ಟ್ ಕೂಡಾ ಪ್ರಣವ್ ಮೊಹಂತಿಯವರನ್ನು ಶ್ಲಾಘಿಸಿತ್ತು ಎಂದು ಹೋರಾಟಗಾರ ಗಿರೀಶ್ ಮಟ್ಟಣ್ಣನವರು ನೆನಪಿಸಿಕೊಂಡಿದ್ದಾರೆ.

ಸೌಜನ್ಯ ಹತ್ಯೆ ಸಂದರ್ಭದ SIT ನಲ್ಲಿದ್ದ ದಕ್ಷ ಅನುಚೇತ್ ಈಗ ಮತ್ತೆ SIT ಗೆ

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಐಪಿಎಸ್ ಅಧಿಕಾರಿ ಅನುಚೇತ್ ರವರು ಎಸ್ಐಟಿ ತಂಡದಲ್ಲಿ ಇರುವುದು ವಿಶೇಷ. ಜೊತೆಗೆ ಅಧಿಕಾರಿಗಳಾದ ಸೌಮ್ಯಲತ, ಚಿತೆಂದ್ರಕುಮರ್ ಅವರನ್ನು ಒಳಗೊಂಡ ನಾಲ್ಕು ಜನರ ತಂಡ ಇದಾಗಿದೆ. ಈ ತಂಡದಲ್ಲಿ ಇರುವ ಅನುಚೇತ್ ಹೆಸರು ಅಚ್ಚರಿ ಮೂಡಿಸುತ್ತದೆ. ಅದಕ್ಕೆ ಕಾರಣಗಳೂ ಇವೆ.

ಅನುಚೇತ್ ರವರು ಸೌಜನ್ಯ ಹತ್ಯೆ ನಡೆದ ಸಂದರ್ಭದಲ್ಲಿ ಕರಾವಳಿ ಪ್ರದೇಶದಲ್ಲಿ ಅಧಿಕಾರದಲ್ಲಿದ್ದರು ಅನ್ನುವುದು ಇಲ್ಲಿ ಗಮನಾರ್ಹ. ಧರ್ಮಸ್ಥಳದಲ್ಲಿ 2012 ರಲ್ಲಿ ಸೌಜನ್ಯ ಅತ್ಯಾಚಾರ ಕೊಲೆ ಆದ ಸಂದರ್ಭದಲ್ಲಿ ಖಡಕ್ ಅಧಿಕಾರಿಯಾಗಿದ್ದ ಅನುಚೇತ್ ಪುತ್ತೂರಿನಲ್ಲಿ ಎಎಸ್ಪಿ ಆಗಿದ್ದರು. ಅಂದು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿತ್ತು.  ಸೌಜನ್ಯ ಅತ್ಯಾಚಾರ ಕೊಲೆ ನಡೆದ ಸಂದರ್ಭ ಕೂಡ ಎಸ್ಐಟಿ ರಚನೆಯಾಗಿತ್ತು. ಅದಾಗ ತಾನೇ ಆರೋಪಿ ಸಂತೋಷ ರಾವ್ ನ ಬಂಧನವಾಗಿತ್ತು. ಈ ಪ್ರಕರಣದಲ್ಲಿ ಇನ್ನೂ ಮೂರು ನಾಲ್ಕು ಜನ ಇದ್ದಾರೆ ಎಂದು ಅನುಚೇತ್ ರವರು ಹೇಳಿದ್ದರು ಎಂದು ವರದಿಯಾಗಿತ್ತು. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದ ಸಂದರ್ಭ ಏಕಾಏಕಿ ಅನುಚೇತ್ ರನ್ನು ತಕ್ಷಣ ವರ್ಗ ಮಾಡಿ ಆ ಜಾಗಕ್ಕೆ ಬೇರೆಯವರನ್ನು ತರಲಾಗಿತ್ತು.

ಈಗ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿಯವರ ಪಾರದರ್ಶಕತೆ ಮತ್ತು ಅನುಚೇತ್’ಗೆ ಕರಾವಳಿಯಲ್ಲಿ ಈ ಹಿಂದೆ ಇದ್ದ ಅನುಭವ ಮತ್ತು ಮಾಹಿತಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲು ಸಹಾಯ ಮಾಡಲಿದೆ ಎನ್ನಲಾಗುತ್ತಿದೆ. ಅವತ್ತಿನ SIT ನಲ್ಲಿದ್ದ ಅನುಚೇತ್ ಮತ್ತೆ ಧರ್ಮಸ್ಥಳ ಹೂತ ಶವಗಳ ಪ್ರಕರಣಗಳ ತನಿಖಾ ತಂಡದಲ್ಲಿ ಅನುಚೇತ್ ಸೇರಿಕೊಂಡಿದ್ದಾರೆ. ಒಟ್ಟಾರೆ ಮಿರಾಕಲ್ ನಡೆದುಹೋಗಿದೆ ಎನ್ನುತ್ತಿದ್ದಾರೆ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್.

ಏಕಾಏಕಿ SIT ಕೊಡಲು ಕಾರಣ ಏನು?

ನಿನ್ನೆಯಷ್ಟೇ ರಾಜ್ಯ ಸರ್ಕಾರ ಎಸ್ಐಟಿ ತನಿಖೆ ಅಸಾಧ್ಯ ಎಂದಿತ್ತು. ‘ಯಾರೋ ಹೇಳಿದರು ಅಂದು ಎಸ್ಐಟಿ ತನಿಖೆ ಮಾಡಲು ಆಗುವುದಿಲ್ಲ’ ಎಂದಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಇದೀಗ ಸಿದ್ದರಾಮಯ್ಯನವರ ಘನ ಸರ್ಕಾರ, ಅಭೂತಪೂರ್ವವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದು ಮೂಲದ ಪ್ರಕಾರ, ಕಾಂಗ್ರೆಸ್ ನ ಮಹಿಳಾ ನಾಯಕಿ ಒಬ್ಬರು ಕಾಂಗ್ರೆಸ್ ಹೈ ನಾಯಕ ರಾಹುಲ್ ಗಾಂಧಿಯವರಿಗೆ ಎಸ್ಐಟಿ ರಚಿಸುವಂತೆ ನಿರ್ದೇಶನ ನೀಡಬೇಕೆಂದು ಒತ್ತಾಯ ಮಾಡಿದ್ದರು. ಅದರಂತೆ ಈಗ ಕರ್ನಾಟಕ ಸರ್ಕಾರ ನಡೆದುಕೊಂಡಿದೆ ಎನ್ನಲಾಗುತ್ತಿದೆ. ಅದಲ್ಲದೆ, ಕಳೆದ ಒಂದು ವಾರದಿಂದ ಇಡೀ ಸರ್ಕಾರದ ಮೇಲೆ ಭಾರೀ ಒತ್ತಡ ಉಂಟಾಗಿತ್ತು. ವಕೀಲರು, ಮಾಜೀ ನ್ಯಾಯಮೂರ್ತಿಗಳು, ಕಾನೂನನ್ನು ಅರೆದು ಕುಡಿದ ಕಾನೂನು ಪಂಡಿತರು ಪ್ರಕರಣದ ತನಿಖೆ ನಡೆಸಲೇ ಬೇಕೆಂದು ಹಟಕ್ಕೆ ಬಿದ್ದಿದ್ದರು. ರಾಜ್ಯ ದೇಶಗಳ ಯೂ ಟ್ಯೂಬರ್ ಗಳು, ನಿರ್ಭೀತ ವೆಬ್ ಮಾಧ್ಯಮಗಳು, ಅವಡು ಕಚ್ಚಿ ಕೂತು ಪುಂಕಾನು ಪುಂಖವಾಗಿ ವರದಿ ಪ್ರಕಟಿಸಲು ಶುರು ಮಾಡಿದ್ದವು. ರಾಜ್ಯವಲ್ಲದೇ ದೇಶದೆಲ್ಲೆಡೆ ನರಮೇಧ ಪ್ರಕರಣದ ಸುದ್ದಿ ಹಬ್ಬಿತ್ತು. ದೇಶದ ಟೈಮ್ಸ್ ನೌ ಇತ್ಯಾದಿ ಇಂಗ್ಲಿಷ್ ಮಾಧ್ಯಮಗಳು ದೊಡ್ಡ ಪ್ರಮಾಣದಲ್ಲಿ ವರದಿ ಬಿತ್ತರಿಸಲು ಶುರು ಮಾಡಿದ್ದು, ನೂರಾರು ಶವಗಳನ್ನು ಹೂತು ಹಾಕಿದ ಪ್ರಕರಣ ಅಂತರ ರಾಷ್ಟ್ರೀಯ ಮಟ್ಟಕ್ಕೆ ಸುದ್ದಿಯಾಯಿತು. ಪೊಲೀಸ್ ಇಲಾಖೆಯ ಮೇಲೆ, ಈ ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀo ಕೋರ್ಟ್ ನ ವಕೀಲ ಕೆವಿ ಧನಂಜಯ ಕೆಂಡ ಕಾರಿದ್ದರು. ‘ಕಾನೂನು ನಿಮಗಿಂತ ಜಾಸ್ತಿ ನನಗೆ ಗೊತ್ತು. ಇವತ್ತು ಪರೀಕ್ಷೆ ಬರೆದ್ರೆ ನಂಗೆ ಜಾಸ್ತಿ ಮಾರ್ಕು ಬರುತ್ತೆ. ಅಷ್ಟರ ಮಟ್ಟಿಗೆ ಇಂಡಿಯನ್ ಪೀನಲ್ ಕೋಡ್ ಅನ್ನು ಓದಿಕೊಂಡಿದ್ದೇನೆ. ಇವರೆಲ್ಲ ಮಾಮೂಲಿ ವಕೀಲರನ್ನು ಇಷ್ಟರ ತನಕ ನೋಡಿದ್ದಾರೆ. ಕಾನೂನು ಏನೆಂದು ನಾನು ತೋರಿಸ್ತೀನಿ’ ಎಂದು ಚಾಲೆಂಜ್ ಮಾಡುವ ರೀತಿಯಲ್ಲಿ ಟಿವಿ ಶೋದಲ್ಲಿ ಮಾತಾಡಿದ್ದರು. ಕಾಂಗ್ರೆಸ್ ಪಕ್ಷದ ಕೆಲ ನಾಯಕರುಗಳು, ಸಿನಿಮಾ ನಟರು ಬುದ್ದಿಜೀವಿಗಳು ಪೊಲೀಸರ ನಿಧಾನದ ನಡಿಗೆಯ ಮೇಲೆ ಅಸಹನೆ ವ್ಯಕ್ತಪಡಿಸಲು ಶುರು ಮಾಡಿದ್ದರು. ಮಹಿಳಾ ಆಯೋಗ SIT ತನಿಖೆಗೆ ಬೇಡಿಕೆ ಇಟ್ಟಿತ್ತು. ಮುಸ್ಲಿಂ ಸಮುದಾಯ ಕೂಡಾ ಅಮಾಯಕ ಹುಡುಗಿಯರ ಸಾವಿಗೆ ಮರುಗಿತ್ತು. ಅಲ್ಲಲ್ಲಿ ಮುಸ್ಲಿಂ ಸಂಘಟನೆಗಳು ನಿಜಾಯಿತಿಯಿಂದ ಪ್ರತಿಭಟನೆಗೆ ಇಳಿದಿದ್ದವು. ಒಟ್ಟಾರೆ ಒತ್ತಡ ವಿಪರೀತವಾಗಿ ಹೋಯಿತು. ಈ ಸಂದರ್ಭ ರಾಜ್ಯ ಕಂಡ ನೇರ ನುಡಿಯ ದಿಟ್ಟ ಲೀಡರ್, ನಮ್ಮೆಲ್ಲರ ನಾಯಕ, ಸಮಾಜವಾದಿ ಸಿದ್ದರಾಮಯ್ಯ ಕಟು ನಿರ್ಧಾರ ತೆಗೆದುಕೊಂಡೆ ಬಿಟ್ಟರು. SIT ರಚನೆ ಆಗಿಯೇ ಹೋಯ್ತು. ಅದೂ, ಅತ್ಯಂತ ಪಾರದರ್ಶಕ ಅನ್ನಿಸುವ ರೀತಿಯಲ್ಲಿ ಎಸ್ಐಟಿ ತಂಡದ ರಚನೆ ಆಗಿ ಹೋಗಿದೆ. ಮುಂಬರುವ ತನಿಖೆಯ ಬಗ್ಗೆ ಜನಸಾಮಾನ್ಯರು ಕುತೂಹಲದ, ನಿರೀಕ್ಷೆಯ ದೃಷ್ಟಿ ಇಟ್ಟುಕೊಂಡು ಕಾಯುತ್ತಿದ್ದಾರೆ. SIT ಮತ್ತು ಸರ್ಕಾರವು ದಶಕಗಳಿಂದ ಹೂತು ಹೋಗಿವೆ ಎನ್ನಲಾದ ಆತ್ಮಗಳಿಗೆ ಒಂದು ಗೌರವ ನೀಡಬೇಕಿದೆ. ಮಣ್ಣು ಹೊದ್ದು ನ್ಯಾಯದ ಕನವರಿಕೆಯಲ್ಲಿ ಮಲಗಿರುವ ಶವಗಳು ಎದ್ದು ಬಂದು ಶೀಘ್ರವಾಗಿ ಸಾಕ್ಷ್ಯ ನುಡಿಯಬೇಕಿದೆ. ‘ಭೀಮ’ನ ಧೈರ್ಯವಂತಿಕೆಗೆ ನಮ್ಮ ಪೊಲೀಸರು ಭೀಮ ಬಲ ತುಂಬಬೇಕಿದೆ!!

Comments are closed.